DAKSHINA KANNADA
ನಶೆಗೆ ಜಾರಿದ ಪೈಲೆಟ್, ದುಬೈ ವಿಮಾನ ಹೊರಟಿತು 5 ಗಂಟೆ ಲೇಟ್
ನಶೆಗೆ ಜಾರಿದ ಪೈಲೆಟ್, ದುಬೈ ವಿಮಾನ ಹೊರಟಿತು 5 ಗಂಟೆ ಲೇಟ್
ಮಂಗಳೂರು, ಜನವರಿ 18: ಮಹಿಳಾ ಪೈಲೆಟ್ ಒಬ್ಬರ ಎಣ್ಣೆ ಪ್ರೇಮದಿಂದಾಗಿ ದೊಡ್ಡ ದುರಂತವೊಂದು ತಪ್ಪಿದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.
ವಿಮಾನ ಹೊರಡುವ ಸಂದರ್ಭದಲ್ಲಿ ಈ ಮಹಿಳಾ ಪೈಲಟ್ ಕಂಠ ಪೂರ್ತಿ ಕುಡಿದು ಮಾಡಿದ ಅವಾಂತರದಿಂದಾಗಿ ದುಬೈ ಗೆ ಹೊರಟಿದ್ದ 180 ಮಂದಿ ಪ್ರಯಾಣಿಕರ ರಕ್ಷಣೆಯಾದಂತಾಗಿದೆ. ಈ ಘಟನೆ ಜನವರಿ 16 ರಂದು ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.
ಜನವರಿ 16 ರಂದು ಸ್ಪೈಸ್ ಜೆಟ್ ವಿಮಾನ ಮಂಗಳೂರಿನಿಂದ ದುಬೈಗೆ ಹೊರಡಬೇಕಾಗಿತ್ತು.
ವಿಮಾನದ ಮಹಿಳಾ ಪೈಲೆಟ್ ನ ಎಣ್ಣೆಯ ನಶೆ ಮಿತಿಮೀರಿದ ಪರಿಣಾಮ ಬದಲಿ ಪೈಲೆಟ್ ಬರುವ ತನಕ ಅಂದರೆ ಸುಮಾರು 5 ಗಂಟೆ ತಡವಾಗಿ ದುಬೈಗೆ ಟೇಕ್ಆಫ್ ಆಗಿದೆ.
ಈ ಹಿನ್ನೆಲೆಯಲ್ಲಿ ಮಧ್ಯರಾತ್ರಿಯಿಂದ ಬೆಳಗಾಗುವ ತನಕ 180 ಮಂದಿ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣಗೊಂಡಿತ್ತು.
ಮಂಗಳೂರು-ದುಬೈ ವಿಮಾನದಲ್ಲಿ ಮಹಿಳಾ ಪೈಲೆಟ್ ಆಗಿದ್ದವರು ಟರ್ಕಿ ಮೂಲದವರು ಎಂದು ತಿಳಿದುಬಂದಿದೆ.
ವಿಮಾನ ಹೊರಡುವ ಮೊದಲು ಪೈಲಟ್ ಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಪ್ರಕ್ರಿಯೆ ಸಂದರ್ಭದಲ್ಲಿ ದುಬೈ ಸಂಚರಿಸುವ ವಿಮಾನದ ಮಹಿಳಾ ಪೈಲೆಟ್ ಕಂಠಪೂರ್ತಿ ಕುಡಿದಿರುವ ವಿಚಾರ ವೈದ್ಯಾಧಿಕಾರಿಗಳ ಗಮನಕ್ಕೆ ಬಂದಿತ್ತು.
ಈ ಹಿನ್ನೆಲೆಯಲ್ಲಿ ಬದಲಿ ಪೈಲೆಟ್ ವ್ಯವಸ್ಥೆ ಆಗುವವರೆಗೆ ವಿಮಾನ ಹಾರಾಟಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದರು ಎನ್ನಲಾಗಿದೆ.
ಮಿತಿ ಮೀರಿ ಮದ್ಯ ಸೇವನೆ ಮಾಡಿದ್ದ 35 ವರ್ಷದ ಟರ್ಕಿ ಮೂಲದ ಮಹಿಳಾ ಪೈಲಟ್ ವಿರುದ್ಧ ನಿಯಮಾನುಸಾರ ಕ್ರಮ ಜರಗಿಸಲು ಸಂಬಂಧಪಟ್ಟ ವಿಮಾನ ಕಂಪೆನಿಯ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳಳು ತಿಳಿಸಿವೆ.