LATEST NEWS
ಧರ್ಮಸಂಸತ್ ಮೊದಲ ದಿನವೇ ರಾಮಜನ್ಮಭೂಮಿ ಬಗ್ಗೆ ಚರ್ಚೆ
ಧರ್ಮಸಂಸತ್ ಮೊದಲ ದಿನವೇ ರಾಮಜನ್ಮಭೂಮಿ ಬಗ್ಗೆ ಚರ್ಚೆ
ಉಡುಪಿ ನವೆಂಬರ್ 22: ಈ ಧರ್ಮಸಂಸತ್ ಸುಮಾರು ಎರಡು ಸಾವಿರ ಸಂತರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಪೇಜಾವರ ಶ್ರೀಗಳ ಸೂಕ್ತ ಸೂಚನೆಗಳ ಪ್ರಕಾರ ಧರ್ಮ ಸಂಸತ್ತು ನಡೆಯುತ್ತಿದೆ. ದೇಶದ ಉದ್ದಗಲದಿಂದ ವಿಮಾನ, ರೈಲು- ರಸ್ತೆ ಮಾರ್ಗವಾಗಿ ಉಡುಪಿಗೆ ಸಂತರು ಬರಲಿದ್ದಾರೆ. ಸಂತರಿಗೆ ಮಠ, ಛತ್ರ, ದೇವಸ್ಥಾನ, ಸಭಾಂಗಣದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ವಿಶ್ವಹಿಂದೂ ಪರಿಷತ್ ಪ್ರಾಂತ ಅಧ್ಯಕ್ಷ ಎಂ. ಬಿ ಪುರಾಣಿಕ್ ತಿಳಿಸಿದ್ದಾರೆ.
ಅವರು ಇಂದು ಉಡುಪಿಯಲ್ಲಿ ಧರ್ಮಸಂಸತ್ ಕಾರ್ಯಕ್ರಮದ ಬಗ್ಗೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ನವೆಂಬರ್ 24ರ ಬೆಳಗ್ಗೆ ಕೃಷ್ಣಮಠದಿಂದ ಸಂತರ ಮೆರವಣಿಗೆ ಆರಂಭವಾಗಲಿದ್ದು, ಋಷಿ ಮುನಿಗಳ ಪಾದ ಪೂಜೆ ನಡೆಸಿ ಮೆರವಣಿಗೆ ಆರಂಭವಾಗಲಿದೆ ಎಂದರು. 10 ಗಂಟೆಗೆ ಧರ್ಮಸಂಸತ್ತು ಉದ್ಘಾಟನೆಯಾಗಲಿದೆ. ಮೊದಲ ದಿನ ರಾಮ ಜನ್ಮಭೂಮಿಯ ಬಗ್ಗೆ ಚರ್ಚೆ- ನಿರ್ಣಯ ನಡೆಯಲಿದೆ, ಈ ಚರ್ಚೆಯಲ್ಲಿ ಸಂತರಿಗೆ ಮಾತ್ರ ಭಾಗಿಯಾಗಲು ಅವಕಾಶ ಇದೆ ಎಂದರು. ಬರುವ ಎಲ್ಲಾ ಸಂತರಿಗೆ ಉತ್ತರ ಭಾರತ- ದಕ್ಷಿಣ ಭಾರತ ಊಟೋಪಚಾರವಿದೆ ವಿಹಿಂಪ ಪ್ರಾಂತ ಅಧ್ಯಕ್ಷ ಎಂ.ಬಿ ಪುರಾಣಿಕ್ ತಿಳಿಸಿದ್ದಾರೆ.
ಡಾ.ಡಿ. ವಿರೇಂದ್ರ ಹೆಗ್ಗಡೆ ಅವರಿಂದ ಸಿದ್ದತೆ ಪರಿಶೀಲನೆ
ಉಡುಪಿಯಲ್ಲಿ ನವೆಂಬರ್ 24 ರಿಂದ ಮೂರು ದಿನಗಳ ಕಾಲ ನಡೆಯುವ ಧರ್ಮ ಸಂಸದ್ ಅಂತಿಮ ಹಂತದ ಸಿದ್ದತೆಗಳನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಪರಿಶೀಲಿಸಿದರು.
ಇದೇ ನವೆಂಬರ್ 24,25,26 ರಂದು ಧರ್ಮ ಸಂಸದ್ ಕಾರ್ಯಕ್ರಮ ನಗರದ ರಾಯಲ್ ಗಾರ್ಡನ್ ನಲ್ಲಿ ನಡೆಯಲಿದೆ. ಕಾರ್ಯಕ್ರಮ ನಡೆಯುವ ವೇದಿಕೆ, ಸಭಾಂಗಣಗಳ ಅಂತಿಮ ಹಂತದ ಸಿದ್ದತೆ ನಡೆಯುತ್ತಿದ್ದು, ಅಂತಿಮ ಹಂತದ ಸಿದ್ದತೆಗಳನ್ನು ಡಾ. ಡಿ. ವಿರೇಂದ್ರ ಹೆಗ್ಗಡೆ ಅವರು ಪರಿಶೀಲಿಸಿದರು.