DAKSHINA KANNADA
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 200 ಮಂದಿಗೆ ಮಹಾಮಾರಿ ಎಚ್ 1 ಎನ್ 1
ಮಂಗಳೂರು,ಆಗಸ್ಟ್.03 : ರಾಜ್ಯದಲ್ಲಿ ಮಹಾಮಾರಿ ಎಚ್ 1 ಎನ್ 1 ಮಾರಿ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದೆ, ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಈ ವರೆಗೆ ಸುಮಾರು 44 ಲಕ್ಷ ಜನ ಮಾರಕ ಸಾಂಕ್ರಮಿಕ ರೋಗಗಳಾದ ಡೆಂಗ್ಯೂ, ಚಿಕುನ್ ಗುನ್ಯ, ಹಂದಿ ಜ್ವರಗಳಿಗೆ ತುತ್ತಾಗಿದ್ದಾರೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಸುಶಿಕ್ಷಿತರ ನಾಡದ ಕರಾವಳಿಗೂ ಈ ರೋಗ ವ್ಯಾಪಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಆಗಸ್ಟ್ ವರೆಗೆ ಎಚ್1ಎನ್1 ಸಂಬಂಧಿಸಿ 752 ಮಂದಿಯ ತಪಾಸಣೆ ನಡೆಸಲಾಗಿದ್ದು, 200 ಮಂದಿಯಲ್ಲಿ ಹಂದಿ ಜ್ವರದ ಸೋಂಕು ಧೃಡ ಪಟ್ಟಿದೆ. ಇದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಆದರೆ ಸ್ಥಳೀಯ ಸಂಸ್ಥೆಗಳು, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಇದುವರೆಗೂ ಎಚ್ಚೆತ್ತಿಲ್ಲ.
ಮಹಾಮಾರಿ H1N1 ಕಾಯಿಲೆಗೆ ಬಾಣಂತಿ ಮಹಿಳೆ ಬಲಿ
ಮಲೇರಿಯಕ್ಕೆ ಕುಖ್ಯಾತಿ ಪಡೆದ ದಕ್ಷಿಣ ಕನ್ನಡದಲ್ಲಿ ಮಲೇರಿಯ ಪ್ರಮಾಣ ತೀವೃವಾಗಿ ಇಳಿಮುಖಗೊಂಡಿದೆ ಆದರೆ ಹಂದಿ ಜ್ವರ ಏರುಗತಿಯಲ್ಲಿ ಕಂಡುಬರುತ್ತಿವುದು ಕಳವಳಕಾರಿಯಾಗಿದೆ. 2016ರಲ್ಲಿ ಜನವರಿಯಿಂದ ಜೂನ್ ವರೆಗೆ ಜಿಲ್ಲೆಯಲ್ಲಿ 2,477 ಮಲೇರಿಯಾ ಪ್ರಕರಣ ಪತ್ತೆಯಾಗಿತ್ತು. 2017ರಲ್ಲಿ ಇದೇ ಅವಧಿಯಲ್ಲಿ 1416 ಮಲೇರಿಯಾ ಪ್ರಕರಣಗಳು ದೃಢಪಟ್ಟಿದ್ದವು.
ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.40 ಮಲೇರಿಯಾ ಪ್ರಕರಣ ಇಳಿಕೆಯಾಗಿದೆ. ಈ ಹಿಂದಿನ ಅಂಕಿ ಅಂಶಗಳನ್ನು ಗಮನಿಸಿದರೆ 2009ರಲ್ಲಿ ಪ್ರಥಮಬಾರಿಗೆ ಜಿಲ್ಲೆಯಲ್ಲಿ ಎಚ್ 1 ಎನ್ 1 ಸೋಂಕು ಪತ್ತೆಯಾಗಿತ್ತು. 2015ರಲ್ಲಿ 500 ಮಂದಿಯ ಪರೀಕ್ಷೆ ನಡೆಸಲಾಗಿದ್ದು, 160 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಏಳು ಮಂದಿ ಸಾವನ್ನಪ್ಪಿದ್ದು ದಾಖಲೆಯಾಗಿತ್ತು. 2016ರಲ್ಲಿ 53 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಏಳು ಪ್ರಕರಣ ಪತ್ತೆಯಾಗಿದ್ದವು.
ಎಚ್1ಎನ್1 ಬಗ್ಗೆ ಜನರಿಗೆ ಯಾವುದೇ ಭಯ ರೋಗ ಲಕ್ಷಣ ಕಂಡುಬಂದ ಕೂಡಲೇ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆದರೆ ರೋಗ ಗುಣಪಡಿಸಬಹುದು ಎಂದು ಆರೋಗ್ಯ ಇಲಾಖೆ ಹೇಳುತ್ತದೆ. ಎಚ್1 ಎನ್1 ಸೋಂಕು ಕಂಡುಬಂದ ಗರ್ಭಿಣಿಯರು, ಮಧುಮೇಹ, ಕ್ಷಯ, ಕ್ಯಾನ್ಸರ್, ಮೂತ್ರಪಿಂಡ, ಯಕೃತ್ ಸಮಸ್ಯೆ ಇರುವವರು, 5 ವರ್ಷಕ್ಕಿಂತ ಕೆಳಗಿನ ಮಕ್ಕಳು, ವೃದ್ಧರಲ್ಲಿ ಈ ಸೋಂಕು ಉಲ್ಭಣಗೊಳ್ಳುವ ಸಾಧ್ಯತೆ ಹೆಚ್ಚು ಆದ್ದರಿಂದ ತಕ್ಷಣ ಅವರುಗಳು ತಪಾಸಣೆ ನಡೆಸಿ ವೈದ್ಯರ ಸಲಹೆಯಂತೆ ಸೂಕ್ತ ಔಷಧ ಸೇವಿಸಬೇಕು.
ರೋಗದ ಬಗ್ಗೆ ಜನಜಾಗೃತಿ ಮೂಡಿಸಬೇಕಾದ ಮತ್ತು ಸ್ಚಚ್ಚತೆಗೆ ಹೆಚ್ಚು ಆದ್ಯತೆ ನೀಡಬೇಕಾದ ಮಂಗಳೂರು ಮಹಾ ನಗರ ಪಾಲಿಕೆ ,ಸ್ಥಳೀಯ ಸಂಸ್ಥೆಗಳು, ಆರೋಗ್ಯ ಇಲಾಖೆಗಳು ಗಂಭೀರ ಚಿಂತನೆ ನಡೆಸಿರುವುದು ಕಂಡು ಬರುತ್ತಿಲ್ಲ. ಕೇವಲ ಪ್ರಚಾರದ ದೃಷ್ಟಿ ಇಟ್ಟುಕೊಂಡು, ಹೇಳಿಕೆಗಳನ್ನು ನೀಡಿದರೆ ಸಮಸ್ಯೆ ಪರಿಹಾರವಾಗಲ್ಲ. ಅಧಿಕಾರಿಗಳು ತಮ್ಮ ಹವಾನಿಯಂತ್ರಿತ ಕೊಠಡಿಗಳಿಂದ ಹೊರಬಂದು ಸಮರೋಪಾದಿಯಲ್ಲಿ ಕೆಲಸಮಾಡಬೇಕಾಗಿದೆ.ಇಲ್ಲದೆ ಹೋದಲ್ಲಿ ಭಾರಿ ಬೆಲೆ ತೆರಬೇಕಾಗಿ ಬರಬಹುದು.