LATEST NEWS
ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿಯ ಮಹಾರಥೋತ್ಸವ ಸಂಪನ್ನ
ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿಯ ಮಹಾರಥೋತ್ಸವ ಸಂಪನ್ನ
ಸುಬ್ರಹ್ಮಣ್ಯ ನವೆಂಬರ್ 24: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಚಂಪಾ ಷಷ್ಠಿಯ ಮಹಾರಥೋತ್ಸವ ಸಂಪನ್ನಗೊಂಡಿತ್ತು. ಹದಿನಾರು ದಿನಗಳ ಕಾಲ ನಡೆಯುವ ಜಾತ್ರೋತ್ಸವದ ಕಾರ್ಯಕ್ರಮಗಳಲ್ಲಿ ಕ್ಷೇತ್ರದಲ್ಲಿ ಮೂರು ದಿನಗಳ ಆಚರಣೆಗಳು ವಿಶಿಷ್ಟವಾಗಿರುತ್ತದೆ.
ಚೌತಿ,ಪಂಚಮಿ ಹಾಗೂ ಷಷ್ಠಿ ಯಂದು ಇಲ್ಲಿ ವಿಶೇಷ ಸೇವೆಯಾದ ಎಡೆಮಡಸ್ನಾನದ ಜೊತೆಗೆ ಕ್ಷೇತ್ರಾಧಿಪತಿಯಾದ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಉಮಾಮಹೇಶ್ವರ ದೇವರಿಗೆ ರಥೋತ್ಸವವೂ ನಡೆಯುತ್ತದೆ. ಇಲ್ಲಿ ನಡೆಯುವ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ವಿಶಿಷ್ಟ ಮಹತ್ವವೂ ಇದೆ.
ರಾಜ್ಯದ ಅತ್ಯಂತ ದೊಡ್ಡ ರಥಗಳಲ್ಲಿ ಸುಬ್ರಹ್ಮಣ್ಯ ರಥವೂ ಒಂದಾಗಿದೆ. ಚಂಪಾ ಷಷ್ಠಿಯ ದಿನದಂದು ಈ ರಥೋತ್ಸವ ನಡೆಯುತ್ತಿದ್ದು, ಈ ಬಾರಿ ಧನುರ್ ಲಗ್ನದ 8.37 ರ ಮುಹೂರ್ತದಲ್ಲಿ ಬ್ರಹ್ಮರಥೋತ್ಸವ ನಡೆಯಿತು. ದೇವಸ್ಥಾನದ ಪ್ರಾಂಗಣದಲ್ಲಿ ನಡೆಯುವ ಧಾರ್ಮಿಕ ವಿಧಿ ವಿಧಾನಗಳ ಬಳಿಕ ಮೊದಲಿಗೆ ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರ ರಥೋತ್ಸವ ನಡೆದರೆ, ಬಳಿಕ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯುತ್ತದೆ.
ರಥೋತ್ಸವ ನಡೆಯುವ ಸಂದರ್ಭದಲ್ಲಿ ಭಕ್ತಾಧಿಗಳು ರಥದ ಮೇಲೆ ಹೆಸರು ಕಾಳು, ಸಾಸಿವೆ ಕಾಳು ಮೊದಲಾದ ಪದಾರ್ಥಗಳನ್ನು ಎಸೆಯುವ ಮೂಲಕ ತಮ್ಮ ಹರಕೆಯನ್ನು ತೀರಿಸುವ ಸಂಪ್ರದಾಯವೂ ಇಲ್ಲಿಯದ್ದಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ನಡೆಯುವ ಈ ಜಾತ್ರಾ ಕಾರ್ಯಕ್ರಮಗಳನ್ನು ವೀಕ್ಷಿಸಲು ದೇಶ ಹಾಗೂ ವಿದೇಶಗಳಿಂದಲೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಮೊದಲ ಬಾರಿಗೆ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವ ನೋಡಿದ ಭಕ್ತಾಧಿಗಳಿಗೆ ಜೀವನದಲ್ಲಿ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾದ ಅನುಭವವನ್ನೂ ಪಡೆದರು.
ರಥವನ್ನು ಇಲ್ಲಿ ಹಗ್ಗದ ಬದಲು ಬಿದಿರಿನಿಂದಲೇ ಎಳೆಯಲಾಗುತ್ತದೆ. ಹೀಗೆ ಎಳೆದ ಬಿದಿರನ್ನು ರಥೋತ್ಸವದ ಬಳಿಕ ಭಕ್ತಾಧಿಗಳಿಗೆ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ. ಈ ಬಿದಿರನ್ನು ಮನೆಯಲ್ಲಿ ಇರಿಸಿದಲ್ಲಿ ನಾಗದೋಷ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಭಕ್ತರದ್ದಾಗಿದೆ.