LATEST NEWS
ಕನ್ನಡ ಸಾಹಿತ್ಯ ಸಮ್ಮೇಳನ – ಪೇಜಾವರ ಶ್ರೀಗಳಿಗೆ ಕರ್ನಾಟಕ ಬಿಟ್ಟು ಹೋಗುವಂತೆ ಒತ್ತಾಯ
ಕನ್ನಡ ಸಾಹಿತ್ಯ ಸಮ್ಮೇಳನ – ಪೇಜಾವರ ಶ್ರೀಗಳಿಗೆ ಕರ್ನಾಟಕ ಬಿಟ್ಟು ಹೋಗುವಂತೆ ಒತ್ತಾಯ
ಮೈಸೂರು,ನವೆಂಬರ್ 26: ಪೇಜಾವರ ಶ್ರೀಗಳು ಸಂವಿಧಾನ ವಿರುದ್ಧ ಹೇಳಿಕೆ ನೀಡಿದ್ದಾರೆ ಹಾಗೂ ಅಲ್ಪಸಂಖ್ಯಾತರ ಮೇಲೆ ಮೂಲಭೂತವಾದಿಗಳು ಚಾತುರ್ವರ್ಣ ಪದ್ಧತಿಯನ್ನು ಬಲಂತವಾಗಿ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಹಿರಿಯ ಚಿಂತಕರು ಹಾಗೂ ಪ್ರಗತಿ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಮುಂಬಾಗ ಜಮಾಯಿಸಿದ ಪ್ರತಿಭಟನೆಕಾರರು ಪೇಜಾವರ ಶ್ರೀ ವಿರುದ್ಧ ಧಿಕ್ಕಾರ ಕೂಗಿದರು. ನಿನ್ನೆ ನಡೆದ ಧರ್ಮಸಂಸದ್ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ಗಳು ಸಂವಿಧಾನದ ವಿರುದ್ಧವಾಗಿ ಮಾತನಾಡಿದ್ದಾರೆ, ಸಂವಿಧಾನವನ್ನು ತಿದ್ದುಪಡಿ ಮಾಡುವಂತೆ ಹೇಳಿದ್ದಾರೆ. ಅಂಬೇಡ್ಕರ್ ಅವರ ಸಂವಿಧಾನವೇ ಅಂತಿಮ. ಆದರೆ ಈ ರೀತಿಯ ಹೇಳಿಕೆ ನೀಡಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಇವರು ಅಸಹಿಷ್ಣುತೆ ಬಗ್ಗೆ ಮಾತನಾಡುವುದಿಲ್ಲ, ಗೋವು ಹಾಗೂ ಅದರ ರಕ್ಷಣೆ ಬಗ್ಗೆ ಮಾತನಾಡುತ್ತಾರೆ, ಮನುಷ್ಯರ ಪ್ರಾಣದ ಬಗ್ಗೆ ಇವರಿಗೆ ಕಾಳಜಿ ಇಲ್ಲ, ಗೋವುಗಳಿಗಿಂತ ಕಡಿಮೆಯ ಮನುಷ್ಯ. ಈ ಮೂಲಕ ಅಸಹಿಷ್ಣುತೆ ಯನ್ನು ನೀವೆ ಹುಟ್ಟುಹಾಕುತ್ತಿದ್ದೀರಿ. ಎಂದು ಶ್ರೀ ಗಳ ವಿರುದ್ಧ ಧಿಕ್ಕಾರ ಕೂಗಿದರು.
ನಾವು ವಿವೇಕಾನಂದ, ರಾಮಕೃಷ್ಣರ ಪರಮಹಂಸ ಅವರ ಹಿಂದೂ ಧರ್ಮ ವಿರೋಧಿಸುತ್ತಿಲ್ಲ, ಸಂವಿಧಾನವನ್ನು ಯಾರೋ ವಿರೋಧಿಸುತ್ತಿದ್ದಾರೋ ಹಾಗೂ ಮೂಲಭೂತ ವಾದವನ್ನು ಬಲವಂತವಾಗಿ ಹೇರಲು ಪ್ರಯತ್ನಿಸುತ್ತಿದ್ದಾರೊ ಅವರ ವಿರುದ್ಧ ನಮ್ಮ ಹೋರಾಟ. ಆದ್ದರಿಂದ ಈ ಕೂಡಲೆ ಪೇಜಾವರ ಶ್ರೀ ಗಳು ರಾಜ್ಯದಿಂದ ಹೊರ ಹೋಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ವೇಳೆ ಡಾ ಮೀನಾಕ್ಷಿ ಬಾಳಿ ಜನವಾದಿ ಮಹಿಳಾ ಸಂಘಟನೆಯ ಹೋರಾಟಗಾರ್ತಿ, ಸಾಹಿತಿ ಮೂಡ್ನಕೂಡು ಚಿನ್ನಸ್ವಾಮಿ ಹಾಗೂ ಇನ್ನಿತರ ಬಂಡಾಯ ಸಾಹಿತಿಗಳು ಇದ್ದರು.