DAKSHINA KANNADA
ಕರಾವಳಿಗೂ ಅಪ್ಪಳಿಸಲಿದೆಯೇ ಓಖೀ, ಧೂಳೀಪಟವಾಯಿತು ತಿರುವನಂತಪುರ, ಇಡುಕ್ಕೀ…
ಕರಾವಳಿಗೂ ಅಪ್ಪಳಿಸಲಿದೆಯೇ ಓಖೀ, ಧೂಳೀಪಟವಾಯಿತು ತಿರುವನಂತಪುರ, ಇಡುಕ್ಕೀ…
ಮಂಗಳೂರು,ನವೆಂಬರ್ 30: ತಮಿಳುನಾಡು ಹಾಗೂ ಕೇರಳದ ಬಹು ಭಾಗದಲ್ಲಿ ತನ್ನ ರುದ್ರ ನರ್ತನವನ್ನು ತೋರಿದ ಓಖೀ ಚಂಡಮಾರುತ ಕರ್ನಾಟಕದ ಕರಾವಳಿಯನ್ನೂ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದೆ. ಹಿಂದೂ ಮಹಾಸಾಗರದಲ್ಲಿ ಈ ಖುತುವಿನ ಮೊದಲ ಬಾರಿಗೆ ಬೀಸುತ್ತಿರುವ ಈ ಚಂಡಮಾರುತ ಅರಬ್ಬೀ ಸಮುದ್ರ ಮೂಲಕ ಹಾದು ಹೋಗಲಿದೆ.
ಗಂಟೆಗೆ 38 ಕಿಲೋ ಮೀಟರ್ ವೇಗದಲ್ಲಿ ಆರಂಭಗೊಂಡಿರುವ ಈ ಚಂಡಮಾರುತ ಕೇರಳದ ಕರಾವಳಿ ತಲುಪುವಷ್ಟಕ್ಕೆ ತನ್ನ ವೇಗವನ್ನು ಪ್ರತಿ ಗಂಟೆಗೆ 85 ಕಿಲೋ ಮೀಟರ್ ಹೆಚ್ಚಿಸಿಕೊಂಡಿದೆ. ತಿರುವನಂತಪುರ, ಕನ್ಯಾಕುಮಾರಿ, ಇಡುಕ್ಕೀ ಮೊದಲಾದ ಪ್ರದೇಶಗಳಲ್ಲಿ ಚಂಡಮಾರುತದಿಂದಾಗಿ ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಈಗಾಗಲೇ 5 ಜೀವಹಾನಿಯಾಗಿದ್ದು, ಭಾರೀ ಪ್ರಮಾಣದಲ್ಲಿ ಆಸ್ತಿ-ಪಾಸ್ತಿಗಳು ಹಾನಿಯಾಗಿವೆ. ಇದೀಗ ಓಖೀ ಕೇರಳವನ್ನು ಪ್ರವೇಶಿಸಿದ್ದು, ಯಾವುದೇ ಸಂದರ್ಭದಲ್ಲೂ ಕರ್ನಾಟಕದ ಕರಾವಳಿಯಲ್ಲಿ ತನ್ನ ರೌದ್ರ ನರ್ತನವನ್ನು ತೋರುವ ಸಾಧ್ಯತೆಗಳು ಹೆಚ್ಚಾಗಿದೆ.
ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಉಪಗ್ರಹ ಆಧಾರಿತ ಚಿತ್ರದಲ್ಲಿ ಈ ಚಂಡಮಾರುತದ ಪ್ರಭಾವ ಇಡೀ ಕರ್ನಾಟಕದಾದ್ಯಂತ ಬೀರುವ ಸಾಧ್ಯತೆಯಿದೆ. ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಮಳೆಯು ಆರಂಭಗೊಂಡಿದ್ದು, ಕರಾವಳಿ ಭಾಗದಲ್ಲೂ ಮೋಡ ಕವಿದ ವಾತಾವರಣವು ಕಂಡುಬರುತ್ತಿದೆ. ಯಾವುದೇ ಸಮಯದಲ್ಲೂ ಕರಾವಳಿ ಭಾಗದಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಚಂಡಮಾರುತವೊಂದು ಅರಬೀ ಸಮುದ್ರದ ಕರಾವಳಿಯ ಹತ್ತಿರದಲ್ಲಿ ಹಾದುಹೋಗುತ್ತಿರುವುದು ಇದು ಮೊದಲ ಬಾರಿಯಾಗಿದೆ.