LATEST NEWS
ಸ್ಕೂಟರ್ ಗೆ ಡಿಕ್ಕಿ ಹೊಡೆದ ಕಾರು – ಝೊಮ್ಯಾಟೋ ಡೆಲಿವರಿ ಬಾಯ್ ನಿಧನ

ಉಳ್ಳಾಲ ಫೆಬ್ರವರಿ 10: ಸ್ಕೂಟರ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಝೊಮ್ಯಾಟೋ ಡೆಲಿವರಿ ಬಾಯ್ ಸಾವನ್ನಪ್ಪಿದ ಘಟನೆ ಮಂಜನಾಡಿ ಗ್ರಾಮದ ಕಲ್ಕಟ್ಟ ಎಂಬಲ್ಲಿ ಸಂಭವಿಸಿದೆ.
ಮೃತರನ್ನು ಕುತ್ತಾರು ಸಂತೋಷ ನಗರದ ನಿವಾಸಿ ಅನಿಲ್ ಕುಮಾರ್ (41) ಎಂದು ಗುರುತಿಸಲಾಗಿದೆ. ಅನಿಲ್ ಝೊಮ್ಯಾಟೋ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಸಂಜೆ ವೇಳೆ ಹೊತ್ತಲ್ಲಿ ದೇರಳಕಟ್ಟೆಯ ಜ್ಯೂಸ್ ಮ್ಯಾಜಿಕ್ ಹೊಟೇಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಮಂಜನಾಡಿಯ ಕಲ್ಕಟ್ಟ ಮಾರ್ಗವಾಗಿ ಫುಡ್ ಡೆಲಿವರಿ ಆರ್ಡರ್ ಹಿಡಿದುಕೊಂಡು ತೆರಳುವ ಸಂದರ್ಭ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.

ಕೇರಳ ನೋಂದಣಿಯ ಕಾರನ್ನ ಅಬೂಬಕರ್ ಸಿದ್ದೀಕ್ ಎಂಬವರು ಚಲಾಯಿಸುತ್ತಿದ್ದರೆನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಅನಿಲ್ ಸ್ಥಳೀಯ ಮನೆಯ ಕಂಪೌಂಡಿಗೆ ಎಸೆಯಲ್ಪಟ್ಟು ಬಳಿಕ ರಸ್ತೆಗೆ ಉರುಳಿ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅಪಘಾತ ನಡೆದ ಕಾರಿನಲ್ಲೇ ಗಾಯಾಳುವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಡರಾತ್ರಿ 1.45ರ ಹೊತ್ತಿಗೆ ಚಿಕಿತ್ಸೆ ಫಲಕಾರಿಯಾಗದೆ ಅನಿಲ್ ಸಾವನ್ನಪ್ಪಿದ್ದಾರೆ.