ಸರಿಯಾಗಿ ವೇತನ ನೀಡದೇ ಸತಾಯಿಸುತ್ತಿದ್ದ ಝೊಮ್ಯಾಟೋ ವಿರುದ್ಧ ತಿರುಗಿಬಿದ್ದ ಡೆಲಿವರಿ ಬಾಯ್ಸ್

ಮಂಗಳೂರು ನವೆಂಬರ್ 8: ಸರಿಯಾಗಿ ವೇತನ ನೀಡದೆ ಝೊಮಾಟೋ ಕಂಪೆನಿ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿ ಝೊಮಾಟೋ ಡೆಲಿವರಿ ಹುಡುಗರು ಪ್ರತಿಭಟನೆ ನಡೆಸಿದ್ದಾರೆ.

ಝೊಮಾಟೋ ಕಂಪೆನಿ ಡೆಲಿವರಿ ನಡೆಸುವ ಹುಡುಗರಿಗೆ ಸರಿಯಾಗಿ ವೇತನ ನೀಡದೆ ದಬ್ಬಾಳಿಕೆ ನಡೆಸುತ್ತಿದ್ದು, ವೇತನ ಪ್ರಶ್ನಿಸಿದಾಗ ಕೆಲಸದಿಂದಲೇ ತೆಗೆಯುತ್ತಿದ್ದಾರೆ. 5 ತಿಂಗಳ ಹಿಂದೆ ಡೆಲಿವರಿಗೆ ಇದ್ದ ವೇತನವನ್ನು ಈಗ ಕಂಪೆನಿ ಕಡಿಮೆ ಗೊಳಿಸಿದೆ. ಹಲವು ಭಾರಿ ಸಮಸ್ಯೆಗಳನ್ನು ತೋಡಿಕೊಂಡರೂ ಕಂಪೆನಿಯಿಂದ ಸರಿಯಾದ ಸ್ಪಂಧನೆ ಕೂಡ ಸಿಗದ ಕಾರಣ ಇಂದು ಝೊಮಾಟೋದ ಎಲ್ಲರೂ ಡೆಲಿವರಿ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ.

ಕೂಡಲೇ ಕಂಪೆನಿ ಹಿಂದೆ ಇದ್ದಂತೆಯೇ ವೇತನ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಝೊಮಾಟೋ ಮಂಗಳೂರು ವಿಭಾಗದ ಪ್ರಬಂಧಕ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಪಟ್ಟು ಹಿಡಿದ ಪ್ರತಿಭಟನಾಕಾರರು ವೇತನ ಪರಿಷ್ಕರಿಸದೇ ಇದ್ದಲ್ಲಿ ಪ್ರತಿಭಟನೆ ಹಿಂತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.