DAKSHINA KANNADA
ನೀರು ಪಾಲಾದ ಯುವಕ-ಪೋಷಕರಿಂದ ಕೊಲೆ ಶಂಕೆ

ನೀರು ಪಾಲಾದ ಯುವಕ-ಪೋಷಕರಿಂದ ಕೊಲೆ ಶಂಕೆ
ಮಂಗಳೂರು,ಅಕ್ಟೋಬರ್ 4: ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂಜಿ ಸಮೀಪದ ಶಿಬರೂರು ದೇವಸ್ಥಾನ ಸಮೀಪದ ಕೆರೆಯಲ್ಲಿ ಯುವಕನನ್ನು ಸ್ನೇಹಿತರೇ ನೀರಿನಲ್ಲಿ ಮುಳುಗಿಸಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.ಘಟನೆ ನಿನ್ನೆ ತಡರಾತ್ರಿ ನಡೆದಿದ್ದು ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್ ಠಾಣಾ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತನನ್ನು ಸುರತ್ಕಲ್ ನ ಕೃಷ್ಣಾಪುರದ ನಿವಾಸಿ ಫಯಾಜ್ ಎಂಬವರ ಪುತ್ರ ಮಕ್ಸೂದ್ ಎಂದು ಗುರುತಿಸಲಾಗಿದೆ. ಮೃತ ಮಕ್ಸೂದ್ ಮಂಗಳೂರಿನ ಎಂಆರ್ ಪಿಎಲ್ ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮಕ್ಸೂದ್ ಅಕ್ಟೋಬರ್ 3 ರಂದು ಸಂಜೆ ತನ್ನ ಸ್ನೇಹಿತರ ಜೊತೆ ಸುರತ್ಕಲ್ ಬಳಿ ಇರುವ ಶಿಬರೂರು ದೇವಸ್ಥಾನ ಸಮೀಪದ ಕೆರೆಯ ಕಡೆಗೆ ಈಜಲೆಂದು ತೆರಳಿದ್ದ ಎನ್ನಲಾಗಿದೆ. ರಾತ್ರಿಯಾಗುತ್ತಲೇ ಉಳಿದ ಸ್ನೇಹಿತರು ತಮ್ಮ ಮನೆಗಳಿಗೆ ವಾಪಸ್ ಆಗಿದ್ದು ಮಕ್ಸೂದ್ ಮಾತ್ರ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಮಕ್ಸೂದ್ ನ ಪೋಷಕರು ಸ್ನೇಹಿತರನ್ನು ವಿಚಾರಿಸಿದಾಗ ಅವರು ಸರಿಯಾಗಿ ಉತ್ತರಿಸಲಿಲ್ಲ ಈ ಹಿನ್ನೆಲೆಯಲ್ಲಿ ಸುರತ್ಕಲ್ ಠಾಣಾ ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ.
ತಕ್ಷಣವೆ ಶಿಬರೂರು ಬಳಿ ತೆರಳಿದ ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಕೂಡ ಆತನ ಶವ ಈವರೆಗೆ ಪತ್ತೆಯಾಗಿಲ್ಲ.ಮಕ್ಸೂದ್ ಹೆತ್ತವರು ಇದು ಉದ್ದೇಶಪೂರಕವಾಗಿ ನಡೆದ ಕೃತ್ಯ. ನಮ್ಮ ಮಗನನ್ನು ಕೊಲೆ ಮಾಡಲಾಗಿದೆ ಎಂದು ದೂರಿರುವ ಹಿನ್ನೆಲೆಯಲ್ಲಿ ಸುರತ್ಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಕ್ಸೂದ್ ಜೊತೆ ತೆರಳಿದ್ದ ನಾಲ್ವರನ್ನು ಇಂದು ಮುಂಜಾನೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಸ್ನೇಹಿತರೆ ನೀರಿನಲ್ಲಿ ಮುಳುಗಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸದ್ಯ ನೀರು ಪಾಲಾಗಿರುವ ಮಕ್ಸೂದ್ ಪತ್ತೆಗಾಗಿ ಮುಳುಗು ತಜ್ಞರಿಂದ ಶೋಧ ಕಾರ್ಯಾಚರಣೆ ಮುಂದುವರಿದಿದ್ದು ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ನೀರಿನಲ್ಲಿ ವಾಚ್ ಮತ್ತು ಮೊಬೈಲ್ ಫೋನ್ ಪತ್ತೆಯಾಗಿದೆ.