BELTHANGADI
ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಯುವಕರ ಗುಂಪಿನಿಂದ ಇಬ್ಬರ ಮೇಲೆ ಹಲ್ಲೆ- ಓರ್ವ ಸಾವು

ಬೆಳ್ತಂಗಡಿ ಜುಲೈ 23 : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂಬ ಆರೋಪದ ಮೇಲೆ ಓರ್ವನ ಮೇಲೆ ಹಲ್ಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ್ದು, ಇದನ್ನು ತಡೆಯಲು ಬಂದ ಸಂಬಂಧಿಕನೊಬ್ಬನ ಮೇಲೂ ಹಲ್ಲೆ ಮಾಡಿದ್ದು ಆಸ್ಪತ್ರೆಗೆ ಸಾಗಿಸುವ ವೇಳೆ ಓರ್ವ ಸಾವನ್ನಪ್ಪಿರುವ ಘಟನೆ ಇಂದಬೆಟ್ಟು ಗ್ರಾಮದ ಪರಾರಿ ಶಾಂತಿನಗರ ಎಂಬಲ್ಲಿ ನಡೆದಿದೆ.
ಮೃತರನ್ನು ಜಾರಪ್ಪ ನಾಯ್ಕ್ (55) ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಪರಾರಿ ಶಾಂತಿನಗರದಲ್ಲಿ ನಾರಾಯಣ ನಾಯ್ಕ್(47) ಎಂಬವರು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂಬ ಆರೋಪದ ಮೇಲೆ ಯುವಕರ ತಂಡವೊಂದು ಅವರ ಮೇಲೆ ಹಲ್ಲೆ ನಡೆಸಿದೆ. ಈ ವೇಳೆ ನಾರಾಯಣ ನಾಯ್ಕ್ ಅವರ ಹೆಂಡತಿಯ ಅಕ್ಕನ ಗಂಡ ಜಾರಪ್ಪ ನಾಯ್ಕ್ (55) ಹಲ್ಲೆಯನ್ನು ತಪ್ಪಿಸಲು ಬಂದಾಗ ಅವರಿಗೂ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಜಾರಪ್ಪ ನಾಯ್ಕ್ ಮತ್ತು ನಾರಾಯಣ ನಾಯ್ಕ್ ಇಬ್ಬರು ಅಸ್ವಸ್ಥರಾಗಿ ಬಿದ್ದಿದ್ದರು. ಹಲ್ಲೆಗೊಳಗಾಗಿದ್ದ ಇಬ್ಬರನ್ನು ಜಾರಪ್ಪ ಅವರ ಪುತ್ರ ರಾಜಶೇಖರ್ ವಾಹನದಲ್ಲಿ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತರುತ್ತಿದ್ದಾಗ ದಾರಿ ಮಧ್ಯೆ ಜಾರಪ್ಪ ನಾಯ್ಕ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ನಂತರ ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು ನಾರಾಯಣ ನಾಯ್ಕ್ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಜಾರಪ್ಪ ನಾಯ್ಕ್ ಅವರ ಪುತ್ರ ರಾಜಶೇಖರ್ ದೂರು ನೀಡಿದ್ದಾರೆ.