KARNATAKA
ಜೀಪ್ ಪಲ್ಟಿಯಾಗಿ ಯುವ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ದುರ್ಮರಣ, ಡಿವೈಎಸ್ಪಿ ಕರ್ತವ್ಯಕ್ಕೆ ಬರ್ತಿದ್ದಾಗಲೇ ದುರಂತ
ಹಾಸನ ಡಿಸೆಂಬರ್ 02: ಚಾಲಕನ ನಿಯಂತ್ರಣ ತಪ್ಪಿದ ಪೊಲೀಸ್ ಜೀಪ್ ಪಕ್ಕದ ಮನೆಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಮೃತಪಟ್ಟಿರುವ ಘಟನೆ ಭಾನುವಾರ ಹಾಸನದಲ್ಲಿ ನಡೆದಿದೆ. ಮಧ್ಯಪ್ರದೇಶದ ಸಿಂಗುಲಿ ಜಿಲ್ಲೆಯ ದೋಸಾರ್ ಗ್ರಾಮದ ಹರ್ಷಬರ್ಧನ್ (26) ಮೃತಪಟ್ಟಿರುವ ಐಪಿಎಸ್ ಅಧಿಕಾರಿ. ಜೀಪ್ ಚಾಲಕ, ಹಾಸನದ ಡಿಎಆರ್ ಕಾನ್‌ಸ್ಟೆಬಲ್ ಮಂಜೇಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೈಸೂರಿನಿಂದ ಹಾಸನಕ್ಕೆ ಬರುತ್ತಿದ್ದ ಮಹೇಂದ್ರ ಬುಲೆರೋ ಜೀಪ್ ಟೈಯರ್ ಸ್ಫೋಟದಿಂದ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗದ ತಡೆಕಂಬಗಳಿಗೆ ಡಿಕ್ಕಿ ಹೊಡೆದು ನಂತರ ತೆಂಗಿನ ಮರಕ್ಕೆ ಡಿಕ್ಕಿಯಾಗಿದ್ದು, ಪಕ್ಕದ ಮನೆಗೆ ತಾಗಿ ನಿಂತಿದೆ. ಅಪಘಾತ ಸಂಭವಿಸುತ್ತಿದ್ದಂತೆ ಆಂಬುಲೆನ್ಸ್ ಮೂಲಕ ಹರ್ಷಬರ್ಧನ್ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಅವರನ್ನು ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ಕರೆತರಲು ಪ್ರಯತ್ನ ಪಡುತ್ತಿರುವಾಗಲೇ ಅವರು ಸಾವನಪ್ಪಿದ್ದರು.
ಕೆಲ ದಿನಗಳ ಹಿಂದಷ್ಟೇ ಪೊಲೀಸ್ ಅಕಾಡೆಮಿಲ್ಲಿ ತರಬೇತಿ ಮುಗಿಸಿ ಕರ್ತವ್ಯಕ್ಕೆ ಹಾಜರಾಗುವ ವೇಳೆ ಯುವ ಐಪಿಎಸ್ ಅಧಿಕಾರಿ ಸಾವನ್ನಪ್ಪಿದ್ದಾರೆ. ಯುವ ಐಪಿಎಸ್ ಅಧಿಕಾರಿಯನ್ನು ಉಳಿಸಿಕೊಳ್ಳಲು ಹಿರಿಯ ಪೊಲೀಸ್ ಅಧಿಕಾರಿಗಳು ಶತಾಯಗತಾಯ ಹೋರಾಟ ನಡೆಸಿದರು ವಿಧಿ ಮೇಲಾಟ ನಡೆಸಿದೆ. ಹರ್ಷಬರ್ದನ್ ಪ್ರೊಬೆಷನರಿ ಐಪಿಎಸ್ ಅಧಿಕಾರಿ. ಡ್ಯೂಟಿಗೆ ರಿಪೋರ್ಟ್ ಮಾಡಲು ಮೈಸೂರಿನಿಂದ ಹಾಸನಕ್ಕೆ ಬರುತ್ತಿದ್ದ ವೇಳೆ ನಡೆದ ಭೀಕರ ಅಪಘಾತದಲ್ಲಿ ದಾರುಣ ಅಂತ್ಯ ಕಂಡಿದ್ದಾರೆ. ವೃತ್ತಿ ಜೀವನದ ಆರಂಭದಲ್ಲೇ 25 ವರ್ಷದ ಹರ್ಷಬರ್ಧನ್ ಜೀವನದಲ್ಲಿ ವಿಧಿಯಾಟ ಕ್ರೂರ ನರ್ತನವಾಡಿದ್ದಾನೆ.
ಹರ್ಷಬರ್ಧನ್ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ಟ್ರೇನಿಂಗ್ ಮುಗಿಸಿದ್ದರು. ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿ ಇವತ್ತು ಹಾಸನದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಡಿವೈಎಸ್‌ಪಿಯಾಗಿ ಚಾರ್ಜ್ ತೆಗೆದುಕೊಳ್ಳಬೇಕಿತ್ತು. ಐಜಿಪಿ ಬೋರಲಿಂಗಯ್ಯ ರಿಪೋರ್ಟ್ ಮಾಡಿಕೊಂಡು ಹಾಸನಕ್ಕೆ ಜೀಪ್‌ನಲ್ಲಿ ಬರುತ್ತಿದ್ದರು. ಇನ್ನೇನು ಕೆಲವೇ ನಿಮಿಷಗಳಲ್ಲಿ ಹಾಸನ ತಲುಪಬೇಕು ಅನ್ನುವಷ್ಟರಲ್ಲಿ ದುರಂತ ಸಂಭವಿಸಿದೆ.
ಹರ್ಷಬರ್ದನ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಹಗಲು ರಾತ್ರಿ ಎನ್ನದೇ ಓದಿ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪಾಸ್ ಮಾಡಿದ್ದರು. ಮೂಲತಃ ಬಿಹಾರದ ಹರ್ಷಬರ್ದನ್ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ವಾಸವಾಗಿದ್ದರು. ಮಧ್ಯಪ್ರದೇಶದಲ್ಲಿ ಎಂಜಿನಿಯರಿಂಗ್ ಪದವಿ ಪಡೆದು 2022-23ರ ಐಪಿಎಸ್ ಬ್ಯಾಚ್‌ನಲ್ಲಿ 153ನೇ ರ‍್ಯಾಂಕ್ ಪಡೆದು ತೇರ್ಗಡೆ ಹೊಂದಿದ್ದರು. ಕರ್ನಾಟಕ ಕೇಡರ್‌ನಲ್ಲಿ ರಾಜ್ಯಕ್ಕೆ ಆಯ್ಕೆಯಾಗಿದ್ದರು. ಮೃತರ ತಂದೆ ಕೂಡ ಐಎಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನವೆಂಬರ್ 4ರಿಂದ ಪೊಲೀಸ್ ತರಬೇತಿ ಶುರುವಾಗಿ ಟ್ರೇನಿಂಗ್ ಮುಗಿಸಿ ಇವತ್ತು ಡಿವೈಎಸ್‌ಪಿಯಾಗಿ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಆದರೆ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಯಮನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಇತ್ತ ಮಗನ ಸಾವಿನಿಂದ ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ. ದೊಡ್ಡ ಅಧಿಕಾರಿಯಾಗಿ ಹೆಸರು ಮಾಡಬೇಕೆನ್ನುವ ಕನಸು ಕಂಡು ಅದೇ ದಾರಿಯಲ್ಲಿದ್ದ ಹರ್ಷಬರ್ಧನ್ ದುರಂತ ಅಂತ್ಯ ಕಂಡಿದ್ದಾರೆ.