LATEST NEWS
ನೀವು ನಮ್ಮ ಭಾರತದ ಹೆಮ್ಮೆಯ ಸಂಕೇತ – ಸೈನಿಕರನ್ನು ಭೇಟಿಯಾದ ಮೋದಿ

ಪಂಜಾಬ್, ಮೇ 13: ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪಂಜಾಬ್‌ನ ಅದಮ್‌ಪುರ ವಾಯುನೆಲೆಗೆ ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ ನಡೆಸಿದ್ದಾರೆ.
ಭಾರತದ ‘ಆಪರೇಷನ್ ಸಿಂಧೂರ’ ನಂತರ, ಮೇ 9 ಮತ್ತು 10 ರ ಮಧ್ಯರಾತ್ರಿ ಪಾಕಿಸ್ತಾನ ದಾಳಿ ಮಾಡಲು ಪ್ರಯತ್ನಿಸಿದ ವಾಯುಪಡೆಯ ಕೇಂದ್ರಗಳಲ್ಲಿ ಅದಂಪುರವೂ ಸೇರಿತ್ತು. ನೀವು ನಮ್ಮ ಭಾರತದ ಹೆಮ್ಮೆಯ ಸಂಕೇತ. ನಿಮ್ಮ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಅವರು ಸೈನಿಕರ ಗುಣಗಾನ ಮಾಡಿದರು.

ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಮೇ 7 ರಂದು ಪ್ರಾರಂಭಿಸಲಾದ ಯಶಸ್ವಿ ‘ಆಪರೇಷನ್ ಸಿಂಧೂರ’ ನಂತರ ದೇಶದ ಬಲಿಷ್ಠ ಸಶಸ್ತ್ರ ಪಡೆಗಳಿಗೆ ನಮನ ಸಲ್ಲಿಸಿದ ಒಂದು ದಿನದ ನಂತರ ಪ್ರಧಾನಿಯವರು ವಾಯುಪಡೆ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ.
ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಆಪರೇಷನ್ ಸಿಂಧೂರ ಉದ್ದೇಶಗಳನ್ನು ಸಾಧಿಸುವಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಅಚಲ ಧೈರ್ಯವನ್ನು ಪ್ರದರ್ಶಿಸಿದವು ಎಂದು ಬಣ್ಣಿಸಿದ್ದರು.