DAKSHINA KANNADA
ಎತ್ತಿನಹೊಳೆ ಯೋಜನೆ ಹೋರಾಟಕ್ಕೆ ಕೊನೇ ಮೊಳೆ
ಎತ್ತಿನಹೊಳೆ ಯೋಜನೆ ಹೋರಾಟಕ್ಕೆ ಕೊನೇ ಮೊಳೆ
ಮಂಗಳೂರು ಅಕ್ಟೋಬರ್ 7: ಪಶ್ಚಿಮಘಟ್ಟದಲ್ಲಿ ಹರಿಯುವ ನೇತ್ರಾವತಿ ನದಿಯ ಉಪನದಿಗಳ ನೀರನ್ನು ತಿರುಗಿಸಿ ಬಯಲು ಸೀಮೆಯ ಜಿಲ್ಲೆಗಳಿಗೆ ನೀರುಣಿಸುವ ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಗ್ರೀನ್ ಸಿಗ್ನಲ್ ನೀಡಿದೆ. ಇದರೊಂದಿಗೆ ಎತ್ತಿನಹೊಳೆ ಯೋಜನೆ ಹೋರಾಟಕ್ಕೆ ಕೊನೆ ಮೊಳೆ ಹೊಡೆದಂತಾಗಿದೆ.
ಎರಡು ಸಲ ಬಂದ್ ಆಗಿದ್ದ ಜಿಲ್ಲೆ
ಕರಾವಳಿಗೆ ಮಾರಕವಾಗಿರುವ ಎತ್ತಿನಹೊಳೆ ಯೋಜನೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಜಿಲ್ಲೆಯನ್ನು ಎರಡು ಬಾರಿ ಬಂದ್ ಕೂಡ ಮಾಡಲಾಗಿತ್ತು. ಆದರೆ ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ಹೋರಾಟ ಮೂಲೆಗೂಂಪಾಗಿತ್ತು. ಈಗ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಗ್ರೀನ್ ಸಿಗ್ನಲ್ ನೀಡಿರುವುದು ಎತ್ತಿನಹೊಳೆ ಹೋರಾಟಕ್ಕೆ ಕೊನೆ ಮೊಳೆ ಹೊಡೆದಂತಾಗಿದೆ.
ಯೋಜನೆಯಿಂದ ಪಶ್ಚಿಮ ಘಟ್ಟದ ಪರಿಸರ ಜೀವ ವೈವಿದ್ಯಕ್ಕೆ ಹಾನಿಯಾಗಲಿದೆ ಎಂದು ಸಮಾಜಿಕ ಕಾರ್ಯಕರ್ತ ಸೋಮಶೇಖರ್ ಸಲ್ಲಿಸಿದ್ದ ಅರ್ಜಿಯನ್ನು ಎನ್ ಜಿಟಿ ತಿರಸ್ಕರಿಸಿದ್ದು, ರಾಜ್ಯ ಸರಕಾರಕ್ಕೆ ಷರತ್ತುಗಳೊಂದಿಗೆ ಯೋಜನೆ ಮುಂದುವರೆಸಲು ಅನುಮತಿ ನೀಡಿದೆ.
ಜನವರಿಗೆ ಮೊದಲ ಹಂತದ ಕಾಮಗಾರಿ ಪೂರ್ಣ
ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು ಪಶ್ಚಿಮ ಘಟ್ಟದಲ್ಲಿ ಹರಿಯುವ ನೇತ್ರಾವತಿಯ ಉಪನದಿಗಳ ನೀರನ್ನು ತಿರುಗಿಸಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ , ರಾಮನಗರ ಹಾಗೂ ತುಮಕೂರು ಜಿಲ್ಲೆಗಳಿಗೆ ನೀರು ಪೂರೈಸಲಾಗುವುದು.
264 ಕಿಲೋ ಮೀಟರ್ ಉದ್ದ ಎತ್ತಿನಹೊಳೆ ಯೋಜನೆಯ ಒಟ್ಟಾರೆ ಬಜೆಟ್ 13 ಸಾವಿರ ಕೋಟಿ ರೂಪಾಯಿ ಆಗಿದ್ದು, ಈವರೆಗೆ ಸುಮಾರು 2,882 ಕೋಟಿ ರೂಪಾಯಿ ಬಳಕೆಯಾಗಿದೆ. ಮೊದಲ ಹಂತದ ಕಾಮಗಾರಿ ಜನವರಿ ಅಥವಾ ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿದ್ದು , ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲು 3 ರಿಂದ 4 ವರ್ಷ ಬೇಕಾಗುವ ಸಾಧ್ಯತೆ ಇದೆ.