DAKSHINA KANNADA
ಮಾಜಿ ನೇತ್ರಾವತಿ ನದಿಯಲ್ಲಿ ಎತ್ತಿನಹೊಳೆ ಪ್ರೀಮಿಯರ್ ಲೀಗ್….ಗೆದ್ದವರಿಗೆ ಮೂರು ಬಕೆಟ್ ನೀರು
ಮಂಗಳೂರು ಮೇ 01: ಕರಾವಳಿಯ ಜೀವನದಿ ನೇತ್ರಾವತಿ ಇದೀಗ ಅಕ್ಷರಶಃ ಮರುಭೂಮಿಯಾಗಿ ಮಾರ್ಪಟ್ಟಿದೆ. ಹಲವು ಪ್ರದೇಶಗಳಲ್ಲಿ ಮೈದಾನ ಮಾದರಿಯಾಗಿ ಮಾರ್ಪಟ್ಟಿದ್ದು, ಇದೀಗ ಕ್ರಿಕೆಟ್ ಮ್ಯಾಚ್ ನಡೆಯುವ ಹಂತಕ್ಕೆ ಬಂದಿದೆ.
ಹೌದು… ಕರಾವಳಿಯ ಜೀವನದಿಯಾಗಿದ್ದ ನೇತ್ರಾವತಿ ಇದೀಗ ಬರಡು ಭೂಮಿಯಾಗಿ ಮಾರ್ಪಟ್ಟಿದೆ. ನೇತ್ರಾವತಿ ನದಿ ಹರಿವೂ ಸಂಪೂರ್ಣ ನಿಂತು ಹೋಗಿದ್ದು, ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಈ ನಡುವೆ ನೇತ್ರಾವತಿ ನದಿಯನ್ನು ತಿರುಗಿಸಿ ಎತ್ತಿನಹೊಳೆ ಯೋಜನೆ ಕೈಗೊಂಡ ರಾಜಕಾರಣಿಗಳ ವಿರುದ್ದ ಆಕ್ರೋಶ ಕೇಳಿ ಬಂದಿದೆ.
ಇದೀಗ ಬರಿದಾ ನೇತ್ರಾವತಿ ನದಿಯಲ್ಲಿ ಎತ್ತಿನಹೊಳೆ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯ ಭಾನುವಾರ ನಡೆಯಿತು. ರಾಜ್ಯದ ಹಾಗೂ ಜಿಲ್ಲೆಯ ಪ್ರಮುಖ ರಾಜಕಾರಣಿಗಳ ಹೆಸರು ಧರಿಸಿದವರೇ ಇಲ್ಲಿ ಆಟಗಾರರು. ಪಂದ್ಯ ಗೆದ್ದವರಿಗೆ ಮೂರು ಬಕೆಟ್ ನೀರು ಬಹುಮಾನ!
ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ಇಲ್ಲಿ ಹರಿವು ನಿಲ್ಲಿಸಿ ಕರುಣಾಜನಕ ಸ್ಥಿತಿಗೆ ತಲುಪಿದೆ. ‘ಅವೈಜ್ಞಾನಿಕ ಎತ್ತಿನಹೊಳೆ ಯೋಜನೆಯಿಂದಾಗಿಯೇ ಜಿಲ್ಲೆಯ ಜೀವ ನದಿಗಳು ಬತ್ತಿಹೋಗಿವೆ’ ಎಂದು ಆರೋಪಿಸಿರುವ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಈ ಬಗ್ಗೆ ಜನಜಾಗೃತಿ ಮೂಡಿಸಲು ಹಾಗೂ ಜನರ ಗಮನ ಸೆಳೆಯಲು ಬತ್ತಿದ ಹೊಳೆಯನ್ನೇ ಮೈದಾನವನ್ನಾಗಿ ಬಳಸಿ ‘ಎತ್ತಿನಹೊಳೆ ಪ್ರೀಮಿಯರ್ ಲೀಗ್’ ಅನ್ನು ಹಮ್ಮಿಕೊಂಡಿತ್ತು.
ಎತ್ತಿನಹೊಳೆ ಯೋಜನೆ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂ.ವೀರಪ್ಪ ಮೊಯಿಲಿ ಹಾಗೂ ಡಿ.ವಿ. ಸದಾನಂದ ಗೌಡರ ಹೆಸರನ್ನು ಸೇರಿಸಿ ‘ವೀರಪ್ಪ– ಸದಾನಂದ ಮೈದಾನ’ ಎಂದೇ ಆಯೋಜಕರು ಹೆಸರಿಟ್ಟಿದ್ದರು. ಈ ಯೋಜನೆ ಜಾರಿಗೊಳಿಸುವಾಗ ಜಲಸಂಪನ್ಮೂಲ ಸಚಿವರಾಗಿದ್ದವರು, ಈ ಯೋಜನೆ ವಿರುದ್ಧ ಸೊಲ್ಲೆತ್ತದ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರ ಮುಖವಾಡವನ್ನು ಧರಿಸಿದ್ದ ಎನ್‌ಇಸಿಎಫ್ ಕಾರ್ಯಕರ್ತರು ಇಲ್ಲಿ ಕ್ರಿಕೆಟ್ ಪಂದ್ಯ ಆಡಿದರು.