LATEST NEWS
ಎಕ್ಕೂರು ಬಾಬಾ ಕೊರೊನಾ ಸೋಂಕಿಗೆ ಬಲಿ

ಮಂಗಳೂರು, ಆಗಸ್ಟ್ 14 : ಒಂದು ಕಾಲದಲ್ಲಿ ಕರಾವಳಿಯಲ್ಲಿ ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ಸದ್ದು ಮಾಡಿದ್ದ ಎಕ್ಕೂರು ಬಾಬಾ ಅಲಿಯಾಸ್ ಶುಭಕರ ಶೆಟ್ಟಿ (61) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಲಿವರ್ ಕಾಯಿಲೆಯಿಂದ ಬಳಲುತ್ತಿದ್ದ ಶುಭಕರ ಶೆಟ್ಟಿ ನಿನ್ನೆ ರಾತ್ರಿ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಉಸಿರಾಟದ ಸಮಸ್ಯೆ ಬಿಗಡಾಯಿಸಿದ ಹಿನ್ನೆಲೆ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಇಂದು ಅವರಿಗೆ ಕೊರೊನಾ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. ಈ ನಡುವೆ, ಹೃದಯಾಘಾತಕ್ಕೆ ಒಳಗಾಗಿದ್ದು ಸಂಜೆ ಹೊತ್ತಿಗೆ ಮೃತಪಟ್ಟಿದ್ದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.

ಮುಡಿಪುವಿನ ಪೃಥ್ವಿಪಾಲ್ ರೈ ಕೊಲೆ ಪ್ರಕರಣ ಸೇರಿದಂತೆ ಕೊಲೆ, ಕೊಲೆಯತ್ನ, ಹಫ್ತಾ ವಸೂಲಿ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದ ಎಕ್ಕೂರು ಬಾಬಾ ಕಳೆದ ಹತ್ತು ವರ್ಷಗಳಲ್ಲಿ ರೌಡಿಸಂನಿಂದ ದೂರವಿದ್ದು ಇತರೇ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು.