ಬೆಂಗಳೂರು: ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಚಿತ್ರದ ಬಿಡುಗಡೆಯನ್ನು ಮತ್ತೊಮ್ಮೆ ಮುಂದೂಡಲಾಗಿದೆ ಎಂದು ನಟ ಯಶ್ ಸಾಮಾಜಿಕ ಜಾಲತಾಣಗಳ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ. ಈ ಹಿಂದೆ ಜೂನ್ 4ಕ್ಕೆ ಚಿತ್ರ ತೆರೆಕಾಣಲಿದೆ ಎಂದು ಘೋಷಿಸಲಾಗಿತ್ತು.

ಜಾಗತಿಕ ಗುಣಮಟ್ಟಕ್ಕೆ ಒತ್ತು: ಬಿಡುಗಡೆ ವಿಳಂಬದ ಕುರಿತು ಅಭಿಮಾನಿಗಳಿಗೆ ಪತ್ರ ಬರೆದಿರುವ ಯಶ್, “ಇತ್ತೀಚೆಗೆ ‘ಸಿನಿಮಾಕಾನ್’ ಕಾರ್ಯಕ್ರಮದಲ್ಲಿ ಭಾಗಿಯಾದಾಗ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನಮ್ಮ ನಂಬಿಕೆಯನ್ನು ಹೆಚ್ಚಿಸಿದೆ. ಈ ಸಿನಿಮಾ ಜಗತ್ತಿನಾದ್ಯಂತ ತಲುಪಲು ಅರ್ಹವಾಗಿದೆ. ಭಾರತೀಯ ಚಿತ್ರರಂಗದ ಧ್ವನಿ ಜಾಗತಿಕ ವೇದಿಕೆಯಲ್ಲಿ ಮೊಳಗುತ್ತಿರುವ ಈ ಸಮಯದಲ್ಲಿ, ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಅತ್ಯುತ್ತಮ ಚಿತ್ರ ನೀಡಲು ನಾವು ನಿರ್ಧರಿಸಿದ್ದೇವೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಮೊದಲು ಮಾರ್ಚ್ 19ಕ್ಕೆ ನಿಗದಿಯಾಗಿದ್ದ ಬಿಡುಗಡೆ ದಿನಾಂಕವನ್ನು ನಂತರ ಜೂನ್ 4ಕ್ಕೆ ಮುಂದೂಡಲಾಗಿತ್ತು. ಈಗ ಎರಡನೇ ಬಾರಿಗೆ ದಿನಾಂಕ ಮುಂದೂಡಲ್ಪಟ್ಟಿದ್ದರೂ, ಹೊಸ ಬಿಡುಗಡೆಯ ದಿನಾಂಕವನ್ನು ಚಿತ್ರತಂಡವಿನ್ನೂ ಘೋಷಿಸಿಲ್ಲ. “ಭಾರತೀಯ ಚಿತ್ರರಂಗ ಹೆಮ್ಮೆಪಡುವಂತಹ ಸಿನಿಮಾ ನೀಡುತ್ತೇವೆ, ಅಲ್ಲಿಯವರೆಗೆ ನಿಮ್ಮ ತಾಳ್ಮೆ ಮತ್ತು ಬೆಂಬಲ ಅಗತ್ಯ,” ಎಂದು ಯಶ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.