ಹೊನ್ನಾವರ ಜುಲೈ 31: ಯಕ್ಷಗಾನ ರಂಗದಲ್ಲಿ ತಮ್ಮ ವಿಶಿಷ್ಟ ಹಾಗೂ ಸಹಜ ಹಾಸ್ಯ ನಟನೆಯ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ‘ಹಾಸ್ಯ ಚಕ್ರವರ್ತಿ’ ಎಂದೇ ಜನಮನ್ನಣೆ ಪಡೆದಿದ್ದ ಹಿರಿಯ ಯಕ್ಷಗಾನ ಕಲಾವಿದ ಶ್ರೀಧರ ಭಟ್ ಕಾಸರಕೋಡ (52) ಶುಕ್ರವಾರ ಜುಲೈ 31ರಂದು ನಿಧನರಾಗಿದ್ದಾರೆ.

ಸಹಜ ಹಾಸ್ಯ ಅಭಿನಯ, ತಾಳ್ಮೆ ಹಾಗೂ ಸಮಯಪ್ರಜ್ಞೆಯಿಂದಲೇ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದ ಶ್ರೀಧರ ಭಟ್ ಅವರು ಕಳೆದ ಮೂರೂವರೆ ದಶಕಗಳಿಂದ ಯಕ್ಷಗಾನ ರಂಗದಲ್ಲಿ ಸಕ್ರಿಯರಾಗಿದ್ದರು. ಯಕ್ಷಗಾನದ ಚೌಕಟ್ಟಿಗೆ ಧಕ್ಕೆ ಬಾರದಂತೆ ಪೌರಾಣಿಕ ಪ್ರಸಂಗಗಳಲ್ಲಿ ಹಾಸ್ಯ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಅವರು, ‘ರುದ್ರಕೋಪ’ ಪ್ರಸಂಗದ ಅಜ್ಜಿ ಪಾತ್ರ, ವಿವಿಧ ಪ್ರಸಂಗಗಳ ದೂತ ಹಾಗೂ ಬ್ರಾಹ್ಮಣ ಪಾತ್ರಗಳ ಮೂಲಕ ಮನೆಮಾತಾಗಿದ್ದರು.
ಶ್ರೀಧರ ಭಟ್ ಅವರು ಗುಂಡಬಾಳ, ಮಂದಾರ್ತಿ, ಸಾಲಿಗ್ರಾಮ ಹಾಗೂ ಜಲವಳ್ಳಿ ಪ್ರಸಿದ್ಧ ಮೇಳಗಳಲ್ಲಿ ಪ್ರಮುಖ ಹಾಸ್ಯ ಕಲಾವಿದರಾಗಿ ಸೇವೆ ಸಲ್ಲಿಸಿ ಕಲಾಭಿಮಾನಿಗಳ ಮನ ಗೆದ್ದಿದ್ದರು. ಮೂಲತಃ ಕಾಸರಕೋಡಿನವರಾದ ಇವರು ಪ್ರಸ್ತುತ ಸಾಲ್ಕೋಡ್ ಗ್ರಾಮದ ಮುಲ್ಲೆಮಕ್ಕಿಯಲ್ಲಿ ವಾಸವಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಸಂಖ್ಯೆಯ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ರಂಗದ ಗಣ್ಯರು, ಸಹ-ಕಲಾವಿದರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.