Connect with us

DAKSHINA KANNADA

ಸಪ್ತಸಾಗರ ದಾಟಿ ಯುರೋಪ್ ತಲುಪಿದ ಕರಾವಳಿಯ ಗಂಡುಕಲೆ, ‘ಯಕ್ಷಧ್ರುವ ಪಟ್ಲ ಫೌಂಡೇಶನ್’ ಯುರೋಪ್ ಘಟಕಕ್ಕೆ ಚಾಲನೆ …!

ಮಂಗಳೂರು : ಕರಾವಳಿಯ ಗಂಡು ಕಲೆ  ಸಪ್ತಸಾಗರ ಸಾಗರ ದಾಟಿ ಇದೀಗ ಯುರೋಪ್ ತಲುಪಿದ್ದು ಯಕ್ಷಧ್ರುವ ಪಟ್ಲ ಫೌಂಡೇಶನ್’ ಯುರೋಪ್ ಘಟಕಕ್ಕೆ ಅಕ್ಟೋಬ್ 3 ರಂದು ಅಧಿಕೃತವಾಗಿ  ಉದ್ಘಾಟನೆಗೊಂಡಿತು.

ಅಕ್ಟೊಬರ್ 3, ಜರ್ಮನಿಯು ಏಕೀ ಕರಣವಾದ ದಿನ. ಮ್ಯೂನಿಕ್ ನಗರದಲ್ಲಿ ಅಕ್ಟೊಬರ್ ಫೆಸ್ಟ್ ನೋಡಲೆಂದು ಜನಸಾಗರ. ಈ ಸಂಭ್ರಮದ ಮಧ್ಯವೇ ಇತ್ತಕಡೆಯಲ್ಲಿ ಐನೇವೆಲ್ಟ್ ಹೌಸ್ ನಲ್ಲಿರುವ ಒಂದು ರಂಗಮಂದಿರದಲ್ಲಿ ಸುಮಾರು ಜನ ಕಿಕ್ಕಿರಿದು ತುಂಬಿದ್ದರು. ಎಲ್ಲರಲ್ಲೂ ಕಾರ್ಯ ಕ್ರಮದ ಬಗ್ಗೆ ಕುತೂಹಲ. ಯಕ್ಷಧ್ರುವ ಪಟ್ಲ ಫೌಂಡೇಷನ್ ಇದರ ಯುರೋಪ್ ಘಟಕ ಸ್ಥಾಪಿಸಿ ಔಪಚಾರಿಕವಾಗಿ ಘೋಷಣೆ ಮಾಡುವ ದಿನವಾಗಿತ್ತು.ಮುಖ್ಯ ಅತಿಥಿಗಳಾಗಿ ಭಾರತೀಯ ರಾಯಭಾರ ಕಚೇರಿಯಲ್ಲಿ ಸಾಂಸ್ಕೃತಿಕ ಅಧಿಕಾರಿಗಳಾಗಿರುವ  ರಾಜೀವ್ ಚಿತ್ಕಾರ, ಮ್ಯೂನಿಕ್ ನಗರದ ಎಲ್ಎಂಯೂ ವಿಶ್ವವಿದ್ಯಾ ಲಯ ಇಂಡಾಲಜಿ ವಿಭಾಗದ ಪ್ರಸಿದ್ಧ ನಿವೃತ್ತ ಪ್ರಾಧ್ಯಾಪಕ ಡಾ. ರಾಬರ್ಟ್ ಜೈಡನ್ಬೊಸ್ ಹಾಗೂ ಸನಾತನ ಅಕಾಡಮಿಯ ಶ್ರೀಮತಿ ಅನೂಷಾ ಶಾಸ್ತ್ರಿ , ಸಿರಿಗನ್ನಡಕೂಟ ಮ್ಯೂನಿಕ್ ಅಧ್ಯಕ್ಷ  ಶ್ರೀಧರ ಲಕ್ಷ್ಮಾಪುರ ಹಾಗೂ ಫ್ರಾಂಕ್ಫರ್ಟ್ ರೈನ್ ಮೈನ್ ಕನ್ನಡ ಸಂಘದ ಅಧ್ಯಕ್ಷ  ವೇದಮೂರ್ತಿ ಅವರು ಆಗಮಿಸಿದ್ದರು .
ಮುಖ್ಯ ಅತಿಥಿಗಳು ದೀಪ ಹಚ್ಚಿ ಸಾಂಕೇತಿಕವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ ಘಟಕ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ರಾಜೀವ್ ಚಿತ್ಕಾರರು ಯಕ್ಷಗಾನ ಈ ಮೊದಲು ನೋಡಿರಲಿಲ್ಲ ಇದು ನಮ್ಮ ಭಾರತದ ಅದ್ಭುತ ಕಲೆ ಎಂಬುದು ನಮಗೆ ಹೆಮ್ಮೆ, ಇಂತಹ ಪ್ರಾಚೀನ ಕಲೆಯನ್ನ ಪಾರಂಪರಿಕವಾಗಿ ಪ್ರಪಂಚಕ್ಕೆ ಪರಿಚಯಿಸುವಲ್ಲಿ
ಈ ಯಕ್ಷಧ್ರುವ ಸಂಸ್ಥೆಯು ಯಶಸ್ವೀ ಆಗಲೆಂದು ಆಶಿಸಿದರು. ಡಾ. ಜೈಡನ್ಬೋಸ್ ಅವರು ಅಚ್ಚ ಕನ್ನಡದಲ್ಲಿ ಮಾತನಾಡಿ ಇಪ್ಪತ್ತು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿನ ಒಂದು ಸಣ್ಣಹಳ್ಳಿಯಲ್ಲಿ ಯಕ್ಷಗಾನ ಬಯಲಾಟ ನೋಡಿದ ನೆನಪು ಮಾಡಿಕೊಂಡು, ತಾಯ್ನಾಡಿನಿಂದ ದೂರ ಬಂದಿರುವ ನೀವೆಲ್ಲ ಈ ಯಕ್ಷಗಾನವನ್ನು ಇಲ್ಲಿ ಸಹ ಪರಿಚಯ ಮಾಡುವ ಪ್ರಯತ್ನ ನನಗೆ ಬಹಳ ಸಂತಸ ತಂದಿದೆ. ನಿಮ್ಮ ಪ್ರಯತ್ನ ಸಫಲವಾಗಲಿ ಎಂದು ಆಶೀರ್ವದಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ ಅಧ್ಯಕ್ಷರಾದ ನರೇಂದ್ರ ಶೆಣೈ ರವರು ಮಾತನಾಡಿ ತಮ್ಮ ಹಲವು ವರ್ಷಗಳ ಮಹಾದಾಶಯ ಇಂದು ಕಾರ್ಯಗತ ಆಯ್ತು, ಬಹಳ ಸಂತಸದ ದಿನ, ಮುಂದಿನ ದಿನಗಳಲ್ಲಿ ಯಕ್ಷಗಾನ ಗುರು ಅಜಿತ್ ಪ್ರಭು ರವರ ಸಾರತ್ಯದಲ್ಲಿ ಯುರೋಪ್ ಆದ್ಯಂತ ಯಕ್ಷಗಾನ ಪ್ರದರ್ಶನ ಹಾಗೂ ಮುಖ್ಯವಾಗಿ ನಮ್ಮ ಮುಂದಿನ ಪೀಳಿಗೆಗೆ ಈ ಕಲೆಯನ್ನು ಧಾರೆ ಎರೆಯುವ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.


ಈ ಸುದಿನದಂದು ಸಂಸ್ಥೆಯ ಕಾರ್ಯದರ್ಶಿ ಹಾಗೂ ಜರ್ಮನಿಯ ಯಕ್ಷಗಾನ ಕಲಾವಿದರು ಮತ್ತು ಗುರು  ಅಜೀತ್ ಪ್ರಭು ಕಳೆದ ಒಂದು ವರ್ಷದಿಂದ ಜರ್ಮನಿಯ ಮ್ಯೂನಿಕ್, ಪ್ರಾಂಕ್ಪರ್ಟ್, ನೂರೆನ್ಬರ್ಗ್, ಮತ್ತು ಬೆಲ್ಜಿಯಂ ನ ಬ್ರುಸ್ಸೇಲ್ಸ್ ನಗರಗಳಿಂದ ಯಕ್ಷಗಾನ ಕಲಿಯುತ್ತಿದ್ದ ತಮ್ಮ ವಿದ್ಯಾರ್ಥಿಗಳೊಡನೆ ಯಕ್ಷಗಾನ ಕಲೆಯನ್ನ ಸಂಪ್ರದಾಯಿಕವಾಗಿ ಪರಿಚಯಿಸುವ ಉದ್ದೇಶದಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಸಾಂಪ್ರದಾಯಿಕವಾಗಿ ಹೆಜ್ಜೆ ಕಲಿತು ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಗುರುಗಳು ಬಹಳ ವಿಭಿನ್ನವಾಗಿ ಚೌಕಿ ಪೂಜೆಯನ್ನ ರಂಗದಮೇಲೆ ನಡೆಸಿಕೊಟ್ಟು , ಬಾಲಗೋಪಾಲ, ಪೀಠಿಕೆ ಸ್ತ್ರೀವೇಷ , ತೆರೆ ಒಡ್ಡೋಲಗ , ಪ್ರಯಾಣ ಕುಣಿತ , ಅಭಿಮನ್ಯು ಸುಭದ್ರೆ ಸಂವಾದ ಈ ಎಲ್ಲ ವಿಭಾಗಗಳನ್ನ ವಿದ್ಯಾರ್ಥಿ ಗಳೊಂದಿಗೆ ಸಂಪ್ರದಾಯಿಕವಾಗಿ ಪ್ರದರ್ಶಿಸಿ ಪರಿಚಯ ಮಾಡಿಕೊಟ್ಟರು.
ತದನಂತರ ಯಕ್ಷಗಾನ ವಿದ್ಯಾರ್ಥಿಗಳಿಂದ ಕೋಟ ಶಿವರಾಮ ಕಾರಂತರು ಪರಿಚಯಿಸಿದ ಯಕ್ಷಗಾನ ಬ್ಯಾಲೆ ರೂಪದಲ್ಲಿ ಪ್ರದರ್ಶನಗೊಂಡ ಚಿಕ್ಕ ಮಕ್ಕಳ”ಮಾಯಾಮೃಗ” (ಸೀತಾಪಹರಣ) ಯಕ್ಷಗಾನ ರೂಪಕ ಪ್ರೇಕ್ಷಕರನ್ನ ಮಂತ್ರಮುಗ್ಧ ಗೊಳಿಸಿತು. ವಿಶೇಷವೆಂದರೆ ಕಾರ್ಯಕ್ರಮ ವೀಕ್ಷಿಸಿದವರಲ್ಲಿ ಶೇಖಡಾ 20 ರಷ್ಟು ಕನ್ನಡೇತರ / ಜರ್ಮನ್ ನಾಗರಿಕರಿದ್ದರು. ಕಾರ್ಯಕ್ರಮದ ವೀಕ್ಷಿಸಿ ಯಕ್ಷಗಾನ ಪ್ರಾತ್ಯಕ್ಷಿಕೆ ಮತ್ತು ಮಕ್ಕಳ ಯಕ್ಷಗಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಕಲೆಗಾಗಿ ಕಲಾವಿದರಿಗಾಗಿಯೇ ಪಟ್ಲ ಫೌಂಡೇಶನ್ ಮಾಡುತ್ತಿರುವ ಕೆಲಸವನ್ನ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಮಕ್ಕಳ ಯಕ್ಷಗಾನ ವೀಕ್ಷಿಸಿದ ಬಹಳಷ್ಟು ಪೋಷಕರು ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳಿಗೆ ಯಕ್ಷಗಾನವನ್ನ ಕಲಿಸುವ ಆಸಕ್ತಿಯನ್ನ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಯಕ್ಷಗಾನ ಕಲೆಯನ್ನ ಉಳಿಸಿ ಬೆಳೆಸಿ ಯುರೋಪಿನಾದ್ಯಂತ ಪಸರಿಸುವ ನಮ್ಮ ಯಕ್ಷಧ್ರುವ ಫೌಂಡೇಶನ್ ನ ಮುಂಬರುವ ಎಲ್ಲಾ ಕಾರ್ಯಕ್ರಮಗಳು ಯಶಸ್ವಿ ಆಗುವುದೆನ್ನಲು ಇದೊಂದು ಅತಿದೊಡ್ಡ ಸೂಚನೆ ಎನ್ನಬಹುದು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *