ಗುಜರಾತ್ ನವೆಂಬರ್ 20: ಕ್ರಿಕೆಟ್ ವಿಶ್ವಕಪ್ ನ್ನು ಆಸ್ಟ್ರೇಲಿಯಾ ತಂಡ ಗೆಲ್ಲವುದರೊಂದಿಗೆ ಟೂರ್ನಿ ಮುಗಿದಿದೆ. ವಿಶ್ವಕಪ್ ನ ಸರಣಿಯ ಎಲ್ಲಾ ಪಂದ್ಯಗಳಲ್ಲಿ ಜಯಿಸಿ ಅಜೇರಾಗಿದ್ದ ಭಾರತ ಪೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಶರಣಾಗಿ ನಿರಾಸೆ ಮೂಡಿಸಿದೆ. ಗೆಲವಿನ ತಂಡ ಎಂದೇ ಹೇಳಲಾಗಿದ್ದ ಭಾರತದ ಸೋಲು ಅಭಿಮಾನಿಗಳಿಗೆ ನಿರಾಸೆ ತರಿಸಿದೆ. ಕೇವಲ ಅಭಿಮಾನಿಗಳು ಅಲ್ಲದ ತಂಡದ ಆಟಗಾರರಿಗೂ ಈ ಸೋಲನ್ನು ಅರಗಿಸಿಕೊಳ್ಳಲಾಗದ ಸ್ಥಿತಿ ತಂದಿದ್ದು, ಮೈದಾನದಲ್ಲೇ ಕೆಲವು ಆಟಗಾರರು ಕಣ್ಣೀರಿಟಿದ್ದಾರೆ.

ಫೈನಲ್ ಗೆಲ್ಲುವ ಫೇವರಿಟ್ ತಂಡವಾಗಿದ್ದ ಭಾರತ ತಂಡದ ಮೇಲೆ ಅತಿಯಾದ ನಿರೀಕ್ಷೆಯ ಭಾರ ಇತ್ತು. ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ವಿಜಯದ ರನ್ ಬಾರಿಸುತ್ತಿದ್ದಂತೆಯೇ ಇಡೀ ಮೈದಾನ ಮೌನಕ್ಕೆ ಶರಣಾಯಿತು. ಕೋಟ್ಯಂತರ ಭಾರತೀಯರ ಆಸೆ ನುಚ್ಚುನೂರಾಯಿತು. ಆರನೇ ಬಾರಿಗೆ ವಿಶ್ವಕಪ್ ಟ್ರೋಫಿ ಜಯಿಸಿದ ಆಸ್ಟ್ರೇಲಿಯಾ ತಂಡದ ಸಂಭ್ರಮ ಮುಗಿಲು ಮುಟ್ಟಿತ್ತು.

ಸೋಲಿನ ಬಳಿಕ ಭಾರತೀಯ ಆಟಗಾರರು ಭಾರವಾದ ಹೆಜ್ಜೆಗಳನ್ನು ಇಡುತ್ತಾ ಪೆವಿಲಿಯನ್‌ನತ್ತ ಸಾಗುತ್ತಿದ್ದರೆ, ಭಾರತದ ಕ್ರಿಕೆಟ್ ಪ್ರೇಮಿಗಳ ಕಣ್ಣ ಬಟ್ಟಲುಗಳಲ್ಲಿ ನೀರು ತುಂಬಿತ್ತು. ಮೊಹಮ್ಮದ್ ಸಿರಾಜ್ ಅವರಂತೂ ನೋವು ತಡೆಯಲಾಗದೆ ಅತ್ತೇ ಬಿಟ್ಟರು. ಅವರ ಗಲ್ಲದ ಮೇಲೆ ಕಣ್ಣೀರು ಜಾರುತ್ತಿದ್ದ ದೃಶ್ಯಗಳು ಭಾರತೀಯ ಅಭಿಮಾನಿಗಳ ಹೃದಯ ತಟ್ಟಿತು. ಕುಸಿದು ಮೊಣಕಾಲಿನಲ್ಲಿ ಕುಳಿತ ಕೆ.ಎಲ್ ರಾಹುಲ್ ಅವರ ಚಿತ್ರವಂತೂ ಮನಕಲುವಂತಿತ್ತು.