LATEST NEWS
ಜನಸಂಖ್ಯಾ ಸ್ಪೋಟ ನಿಯಂತ್ರಣ ಅಗತ್ಯ – ದಿನಕರ ಬಾಬು
ಜನಸಂಖ್ಯಾ ಸ್ಪೋಟ ನಿಯಂತ್ರಣ ಅಗತ್ಯ – ದಿನಕರ ಬಾಬು
ಉಡುಪಿ, ಜುಲೈ 11 : ಹೆಚ್ಚುತ್ತಿರುವ ಜನಸಂಖ್ಯೆ ವಿಶ್ವದ ಪ್ರಮುಖ ಸಮಸ್ಯೆಯಾಗಿದೆ, ಜನಸಂಖ್ಯಾ ಸ್ಪೋಟದಿಂದ ನಾಗರೀಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಎಲ್ಲಾ ರಾಷ್ಟ್ರಗಳಿಗೂ ಸಮಸ್ಯೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಜನಸಂಖ್ಯಾ ಸಮಸ್ಯೆಯಿಂದಾಗಿ ಸರ್ಕಾರಗಳು ತಮ್ಮ ನಾಗರೀಕರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸುವುದು ಕಷ್ಟಕರವಾಗಿದೆ, ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ನಿರುದ್ಯೋಗ ಸೃಷ್ಠಿಯಾಗಿ ದೇಶದ ಯುವ ಸಂಪತ್ತು , ಸಂಪಾದನೆಗಾಗಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುತ್ತವೆ, ಭಾರತ ಜನಸಂಖ್ಯೆಯಲ್ಲಿ ವಿಶ್ವದಲ್ಲಿ 2 ನೇ ಸ್ಥಾನದಲ್ಲಿದ್ದು, ಇಲ್ಲಿನ ಯುವ ಸಂಪತ್ತು ಇತರೇ ರಾಷ್ಟ್ರಗಳಿಗಿಂತ ಅಧಿಕವಾಗಿದ್ದು, ಈ ಯುವ ಸಂಪತ್ತಿನ ಸದ್ಬಳಕೆ ಆಗಬೇಕು, ಜನಸಂಖ್ಯೆಯನ್ನು ನಿಯಂತ್ರಿಸುವುದು ಇಂದಿನ ಅಗತ್ಯವಾಗಿದ್ದು, ಕುಟುಂಬ ಯೋಜನಾ ಕ್ರಮಗಳು ಒಂದು ನಿರ್ದಿಷ್ಟ ವರ್ಗಕ್ಕೆ ಮಾತ್ರ ಸೀಮಿತವಾಗದೆ ಎಲ್ಲರೂ ಪಾಲಿಸುವಂತಾಗಬೇಕು,ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಕುಟುಂಬ ಯೋಜನಾ ಕ್ರಮಗಳ ಬಗ್ಗೆ ಸೂಕ್ತ ಮಾಹಿತಿ ನೀಡುತ್ತಿದ್ದು, ಅವರ ಕಾರ್ಯ ಅಭಿನಂದನಾರ್ಹ ಎಂದು ದಿನಕರ ಬಾಬು ಹೇಳಿದರು.
ಜನಸಂಖ್ಯಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜನಸಂಖ್ಯಾ ನಿಯಂತ್ರಣ ಕುರಿತ ಕರಪತ್ರವನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಶೆಟ್ಟಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಸ್ವಾಗತಿಸಿ , ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, 2001 ರಲ್ಲಿ ಭಾರತದ ಜನಸಂಖ್ಯೆ 1.02 ಬಿಲಿಯನ್ ಇದ್ದು, 2011 ರಲ್ಲಿ 1.21 ಬಿಲಿಯನ್ ಗೆ ಏರಿಕೆಯಾಗಿದೆ, ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ 5.28 ಕೋಟಿ ಇದ್ದದ್ದು 6.10 ಕೋಟಿ ಗೆ ಏರಿಕೆಯಾಗಿದೆ, ಉಡುಪಿಯಲ್ಲಿ 11.77 ಲಕ್ಷ ಜನಸಂಖ್ಯೆ ಇದೆ , ದೇಶದಲ್ಲಿ ಲಿಂಗಾನುಪಾತದ ಪ್ರಮಾಣ 933 ರಿಂದ 943 ಕ್ಕೆ ಏರಿಕೆಯಾಗಿದ್ದು, ಕರ್ನಾಟಕದಲ್ಲಿ 965 ರಿಂದ 973 ಕ್ಕೆ ಏರಿದೆ , 2011 ಕ್ಕೆ ಜನಸಂಖ್ಯಾ ಪ್ರಮಾಣ ಭಾರತದಲ್ಲಿ 17.5% ಏರಿಕೆಯಾಗಿದ್ದು, ಕರ್ನಾಟಕದಲ್ಲಿ 15.6% ರಷ್ಟು ,ಉಡುಪಿಯಲ್ಲಿ 5.85% ಏರಿಕೆಯಾಗಿದೆ. ಕರ್ನಾಟಕದಲ್ಲಿ ಪ್ರತಿ 1000 ಕ್ಕೆ 200 ಮಂದಿ 15 ರಿಂದ 45 ವಯೋಮಾನದವರಿದ್ದಾರೆ ಎಂದು ಡಿಹೆಚ್ ಓ ಹೇಳಿದರು.
ವಿವಿಧ ರೀತಿಯ ಜನಸಂಖ್ಯಾ ನಿಯಂತ್ರಣ ವಿಧಾನಗಳು ಇಂದು ಎಲ್ಲಡೆ ಸುಲಭವಾಗಿ ಲಭ್ಯವಾಗುತ್ತಿದ್ದು, ಸರಿಯಾದ ವಿಧಾನವನ್ನು ಯೋಚಿಸಿ ಅಳವಡಿಸಿಕೊಳ್ಳುವಂತೆ ತಿಳಿಸಿದ ಡಾ. ರೋಹಿಣಿ, ಜನಸಂಖ್ಯೆ ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ಮಾತ್ರವಲ್ಲದೇ ಪ್ರತಿಯೊಬ್ಬರೂ ಪಾತ್ರವೂ ಮುಖ್ಯವಾಗಿದೆ ಎಂದು ಹೇಳಿದರು.