Connect with us

    LATEST NEWS

    ಮಹಿಳೆಯರೇ ನಡೆಸುವ ಸಂಜೀವಿನಿ ಸೂಪರ್ ಮಾರ್ಕೆಟ್ ಆರಂಭ

    ಉಡುಪಿ ಅಗಸ್ಟ್ 14: ಮಹಿಳಾ ಸಬಲೀಕರಣದ ಮೂಲಕ ಕುಟುಂಬದ ಆರ್ಥಿಕ ಬೆಳವಣಿಗೆಯ ಉದ್ದೇಶದಿಂದ ಜಾರಿಗೆ ತಂದಿರುವ ರಾಷ್ಟೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಜಿಲ್ಲೆಯ ಮಹಿಳೆಯರು ಆರ್ಥಿಕ ಲಾಭ ತರುವ ಹಲವು ಉದ್ಯಮಗಳಲ್ಲಿ ತೊಡಗಿದ್ದು, ಇದೇ ಮೊದಲ ಬಾರಿಗೆ ಎಲ್ಲಾ ಸೇವೆಗಳನ್ನು ಒದಗಿಸುವ ಸೂಪರ್ ಮಾರ್ಕೆಟ್ ಆರಂಭಿಸುತ್ತಿದ್ದು, ಆಗಸ್ಟ್ 14 ರಂದು ಈ ಸೂಪರ್ ಮಾರ್ಕೆಟ್ ಉಡುಪಿಯ ಹೃದಯಭಾಗದ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಆರಂಭಗೊಳ್ಳಲಿದೆ.

    ಈ ಸೂಪರ್ ಮಾರ್ಕೆಟ್ ನಲ್ಲಿ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘದ ಉತ್ತಮ ಗುಣಮಟ್ಟದ ಅಲಂಕಾರಿಕ/ಒಳಾಂಗಣ ಗಿಡಗಳು, ಯಕ್ಷಗಾನ ಮುಖವಾಡಗಳು ಹ್ಯಾಂಡ್ ಮೇಡ್ ಬ್ಯಾಗ್ ಗಳು, ಕ್ಯಾಂಡಲ್ ಗಳು, ಬಿದಿರಿನ ಬುಟ್ಟಿ , Grow Bag, Wall Paintings, Key Chain, GI Tag ಹೊಂದಿರುವ ಕೈ ಮಗ್ಗದ ಸೀರೆಗಳು, ಮಣ್ಣಿನ ಮಡಕೆ ಇತ್ಯಾದಿ, ಡೋರ್ ಮ್ಯಾಟ್, ಪರಿಶುದ್ಧ ಜೇನುತುಪ್ಪ, ಕಜೆ ಅಕ್ಕಿ, ಸಾವಯವ ಬೆಲ್ಲ, ಫಿನೈಲ್, ಸೋಪ್ ಆಯಿಲ್, ಡಿಟರ್ಜೆಂಟ್, ದೇಸಿ ಗೋ ಉತ್ಪನ್ನಗಳು, ವಿವಿಧ ಬಗೆಯ ತಿಂಡಿ, ತಿನಿಸುಗಳು, ಪೂಜಾ ಸಾಮಗ್ರಿ, ಆರೋಗ್ಯಕರ ಪೇಯಗಳು, ಗುಣಮಟ್ಟದ, ಆರೋಗ್ಯಕರ, ಸಾವಯವ ಉತ್ಪನ್ನಗಳು ಲಭ್ಯವಿವೆ Home made Chacolate, Cake , ಚಿಕ್ಕಿ, ಆಕರ್ಷಕ ಕಲಾಕೃತಿಗಳು ಇತ್ಯಾದಿ ವಸ್ತುಗಳು ಒಂದೇ ಸೂರಿನಡಿ ದೊರೆಯಲಿವೆ.


    ಸದರಿ ಮಳಿಗೆಯನ್ನು ಉಡುಪಿ ತಾಲೂಕು ಪಂಚಾಯತ್ ಹಾಗೂ ನರ್ಬಾಡ್ ಸಂಸ್ಥೆಯ ಸಹಯೋಗದಲ್ಲಿ ಚೇರ್ಕಾಡಿ ಗ್ರಾಪಂ ನ ಪ್ರಗತಿ GPLF ನ ಸಮೃದ್ಧಿ ಸಂಜೀವಿನಿ ಸ್ವಸಹಾಯ ಗುಂಪಿನ ಸದಸ್ಯರು ನಡೆಸಲಿದ್ದು, ಜಿಲ್ಲೆಯ ವಿವಿಧ ಸಂಜೀವಿನಿ ಸಂಘದ ಸದಸ್ಯರು ಉತ್ಪಾದಿಸಿರುವ ವಸ್ತುಗಳನ್ನು ಈ ಕೇಂದ್ರದ ಮೂಲಕ ಮಾರಾಟ ಮಾಡಲಿದ್ದಾರೆ. ಈ ಸೂಪರ್ ಮಾರ್ಕೆಟ್‌ನಲ್ಲಿ, ಸೇವಾ ಸಿಂಧು ಸೇವೆಗಳು, ಪಾಸ್ ಪೋರ್ಟ್, ಪಾನ್ ಕಾರ್ಡ್, ಡ್ರೈವಿಂಗ್ ಕಾರ್ಮಿಕರ ನೋಂದಣಿ ಇತ್ಯಾದಿ ಆನ್ ಲೈನ್ ಸೇವೆಗಳು, ಶಿಕ್ಷಣ, ಬ್ಯೂಟಿಷಿಯನ್, ಟೈಲರಿಂಗ್, ಎಂಬ್ರಾಯಿಡರಿ, ಕುಚ್ಚು ಮೆಹಂದಿ, ಚಂಡೆ, ಯಕ್ಷಗಾನ, ಕ್ಯಾಟರಿಂಗ್, ಕಾನೂನು ಮತ್ತು ಆಪ್ತ ಸಲಹೆ, ಕ್ಯಾಟರಿಂಗ್, ಪೋಟೋಗ್ರಾಫಿ ಮತ್ತು ವೀಡಿಯೋಗ್ರಾಫಿ, ಆರೋಗ್ಯ ಸಲಹೆ ಸೇವೆಗಳೂ ಸಹ ದೊರೆಯಲಿವೆ.


    ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ 155 ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಮೂಲಕ ಒಟ್ಟು 7623 ಸ್ವ ಸಹಾಯ ಗುಂಪುಗಳನ್ನು ರಚಿಸಲಾಗಿದ್ದು, ಈ ಗುಂಪುಗಳಲ್ಲಿ 85000 ಅಧಿಕ ಮಂದಿ ಸದಸ್ಯರಿದ್ದು, ಜಿಲ್ಲೆಯ ಗ್ರಾಮೀಣ ಭಾಗದ ಮಹಿಳೆಯರು ಸಮುದಾಯ ಬಂಡವಾಳ ನಿಧಿಯನ್ನು ಪಡೆದು ಅನೇಕ ರೀತಿಯ ಜೀವನೋಪಾಯ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ.
    ಜಿಲ್ಲೆಯ ಸಂಜಿವಿನಿ ಸ್ವ ಸಹಾಯ ಸಂಘದ ಮಹಿಳೆಯರಿಗೆ , ಜಿಲ್ಲಾ ಪಂಚಾಯತ್ ಮೂಲಕ ಸ್ವ ಉದ್ಯೋಗ ಆರಂಭಿಸಲು ಅಗತ್ಯವಿರುವ ತರಬೇತಿ ಮತ್ತು ಸಮುದಾಯ ಬಂಡವಾಳವನ್ನು ನೀಡುತ್ತಿದ್ದು, ಇದರಿಂದ ಈಗಾಗಲೇ ಹಲವು ರೀತಿಯ ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಅವರು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರೆತಲ್ಲಿ ಇನ್ನೂ ಹೆಚ್ಚಿನ ಆರ್ಥಿಕ ಲಾಭ ಗಳಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಮಹಿಳೆಯರೇ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಸೂಪರ್ ಮಾರ್ಕೆಟ್ ತೆರೆಯುತ್ತಿರುವುದು ಅವರ ಆರ್ಥಿಕ ಬೆಳವಣಗೆಗೆ ಮತ್ತಷ್ಟು ಸಹಕಾರವಾಗಲಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *