DAKSHINA KANNADA
ಉಪ್ಪಿನಂಗಡಿ – ಪತಿಯೊಂದಿಗೆ ವಿರಸ ನೇತ್ರಾವತಿ ನದಿಗೆ ಹಾರಲು ಯತ್ನಿಸಿದಾಕೆಯ ಚೂಡಿದಾರ ಕಚ್ಚಿಹಿಡಿದ ಸಾಕುನಾಯಿ
ಉಪ್ಪಿನಂಗಡಿ ಜೂನ್ 29: ಗಂಡನೊಂದಿಗೆ ಗಲಾಟೆ ಮಾಡಿಕೊಂಡ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ನೇತ್ರಾವತಿ ನದಿಗೆ ಹಾರಲು ಹೋಗಿದ್ದು, ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಸಾಕು ನಾಯಿ ಮಹಿಳೆ. ಆತ್ಮಹತ್ಯೆ ಮಾಡದಂತೆ ತಡೆದ ಘಟನೆ ನಡೆದಿದೆ.
ಸದ್ಯ ಪಿಲಿಗೂಡು ನಿವಾಸಿಯಾಗಿರುವ ಬೆಂಗಳೂರು ಮೂಲದ ಮಹಿಳೆ ಪಿಲಿಗೂಡಿನ ಯುವಕನ ಜೊತೆ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರಿಗೆ ಮದುವೆಯಾಗಿ 16 ವರ್ಷವಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಅಲ್ಲದೆ ಇತ್ತೀಚೆಗೆ ಹೊಸ ಮನೆಯನ್ನು ಕಟ್ಟಿಕೊಂಡು ನೆಮ್ಮದಿಯಿಂದ ಇದ್ದರು. ಆದರೆ ಕೆಲವು ದಿನಗಳಿಂದ ಮೆಕಾನಿಕ್ ವೃತ್ತಿಯ ಪತಿ ಮತ್ತು ಪತ್ನಿ ನಡುವೆ ವಿರಸ ಮೂಡಿತ್ತು. ಗುರುವಾರ ನೊಂದುಕೊಂಡ ಮಹಿಳೆ ಜೀವ ತ್ಯಜಿಸುವ ನಿರ್ಧಾರ ಮಾಡಿ ಗುರುವಾರ ರಾತ್ರಿ ನಡೆದುಕೊಂಡೇ 4 ಕಿ.ಮೀ. ದೂರದ ನೇತ್ರಾವತಿ ಸೇತುವೆಗೆ ಬಂದು ನದಿಗೆ ಹಾರಲು ಯತ್ನಿಸುತ್ತಿದ್ದರು.
ಆದರೆ ಅವರನ್ನು ಮನೆಯಿಂದಲೇ ಹಿಂಬಾಲಿಸಿಕೊಂಡು ಬಂದಿದ್ದ ಸಾಕು ನಾಯಿ ಅಪಾಯ ವನ್ನು ಅರಿತು ಮಹಿಳೆಯ ಚೂಡಿದಾರವನ್ನು ಕಚ್ಚಿ ಹಿಡಿದು, ಬೊಗಳುತ್ತಾ ರಸ್ತೆಯಲ್ಲಿ ಹೋಗುತ್ತಿರುವವರ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಿತ್ತು.ಇದನ್ನು ಗಮನಿಸಿದ ಬೈಕ್ ಸವಾರ ಮತ್ತು ಯು.ಟಿ. ಫಯಾಜ್ ಅವರು ಕೂಡಲೇ ಮಹಿಳೆಯನ್ನು ಹಿಂದಕ್ಕೆಳೆದು ರಕ್ಷಿಸಿದರು. ಒಟ್ಟಾರೆ ಮೂಕಪ್ರಾಣಿಯಾದ ನಾಯಿಯ ತುಡಿತ ಮತ್ತು ಪ್ರಯತ್ನ ಮಹಿಳೆಯನ್ನು ರಕ್ಷಿಸಲು ನೆರವಾದಂತಾಗಿದೆ.
ಶುಕ್ರವಾರ ದಿನವಿಡೀ ರಾಜೀ ಮಾತುಕತೆ ನಡೆಯಿತಾದರೂ ಮಹಿಳೆ ಗಂಡನ ಮನೆಗೆ ಹೋಗಲು ನಿರಾಕರಿಸಿದರು. ಪೊಲೀಸರು ಮತ್ತು ಸ್ಥಳೀಯರು ಮನವೊಲಿಕೆಗೆ ಸಾಕಷ್ಟು ಪ್ರಯತ್ನಿಸಿದರೂ ಯಶಸ್ಸು ಸಿಗಲಿಲ್ಲ.