DAKSHINA KANNADA
ಕೆಯ್ಯೂರು – ಮೊಬೈಲ್ ನಲ್ಲಿ ಹಳೆ ವಿಡಿಯೋ ನೋಡಿ ಕುಖ್ಯಾತ ಚಡ್ಡಿಗ್ಯಾಂಗ್ ಕಥೆ ಕಟ್ಟಿದ ಮಹಿಳೆ
ಪುತ್ತೂರು ನವೆಂಬರ್ 07: ಮಹಿಳೆಯೊಬ್ಬರು ಮೊಬೈಲ್ ನಲ್ಲಿ ಹಳೆಯ ವಿಡಿಯೋ ಒಂದನ್ನು ನೋಡಿ ಮನೆಗೆ ಕುಖ್ಯಾತ `ಚಡ್ಡಿ ಗ್ಯಾಂಗ್’ ಅನ್ನು ಹೋಲುವ ದರೋಡೆಕೋರರ ತಂಡವು ಮನೆಗೆ ಬಂದು ತಲವಾರು ತೋರಿಸಿ ಬೆದರಿಸಿ, ಹಣ, ಒಡವೆ ಕೇಳಿದ್ದಾರೆ ಎಂದು ಆರೋಪಿಸಿದ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರುನಲ್ಲಿ ನಡೆದಿದ್ದು, ಸ್ಥಳಕ್ಕೆ ಬಂದ ಪೊಲೀಸರಿಗೆ ಮಹಿಳೆ ಸುಳ್ಳು ಹೇಳಿರುವುದು ಗೊತ್ತಾಗಿದೆ.
ಕೇರಳ ಮೂಲದ ಕೆಯ್ಯೂರು ನಿವಾಸಿ ಮಾರ್ಗರೇಟ್ ಎಂಬ ಮಹಿಳೆ ಕಳೆದ 4 ತಿಂಗಳ ಹಿಂದೆ ಕೆಯ್ಯೂರಿಗೆ ಆಗಮಿಸಿದ್ದರು, ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಕುಟುಂಬ, ಮಂಗಳವಾರ ರಾತ್ರಿ ಸುಮಾರು 8.30ರ ವೇಳೆಗೆ ಮನೆಗೆ ನಾಲ್ವರು ದರೋಡೆಕೋರರು ಬಂದಿದ್ದರು. ಕಿಟಕಿಯ ಮೂಲಕ ಅವರ ಫೋಟೊ ತೆಗೆದಿದ್ದೇನೆ’ ಎಂದು ಮಹಿಳೆಯು ಫೋಟೊವೊಂದನ್ನು ಮನೆಯ ಮಾಲೀಕರಿಗೆ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದರು. ಮಹಿಳೆ ಯ್ಯೂಟ್ಯೂಬ್ ನಿಂದ ವಿಡಿಯೋ ಡೌನ್ ಲೋಡ್ ಮಾಡಿ ಚಡ್ಡಿ ಗ್ಯಾಂಗ್ ಎಂದು ಶೇರ್ ಮಾಡಿದ್ದರು ಎಂದು ಹೇಳಲಾಗಿದೆ. ಸ್ಥಳೀಯರು ಈ ಬಗ್ಗೆ ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿದ ಸರ್ಕಲ್ ಇನ್‌ಸ್ಪೆಕ್ಟರ್ ರವಿ.ಬಿ.ಎಸ್, ಆ ಮಹಿಳೆಯ ಮೊಬೈಲ್ ಫೋನ್ ಪರಿಶೀಲಿಸಿದ್ದರು. ಆಕೆ ಹಂಚಿಕೊಂಡ ಫೋಟೊಗಳು ಕೊಟ್ಟಾಯಂನಲ್ಲಿ ಎರಡು ವರ್ಷಗಳ ಹಿಂದೆ ನಡೆದ ಘಟನೆ ಕುರಿತು ಪ್ರಸಾರವಾಗಿದ್ದ ವಿಡಿಯೊ ಸ್ಟೋರಿಯ ಸ್ಟೀನ್ ಶಾಟ್ ಎಂದು ಗೊತ್ತಾಗಿತ್ತು. ಊರಿಗೆ ಚಡ್ಡಿ ಗ್ಯಾಂಗ್ ದರೋಡೆಕೋರರು ಬಂದಿದ್ದಾರೆ ಎಂಬ ಸುದ್ದಿ ಕೇಳಿ ಸ್ಥಳೀಯರು ಆತಂಕಕ್ಕೊಳಗಾಗಿದ್ದರು. ಪೊಲೀಸರು ಈ ವಿಚಾರವನ್ನು ಅಲ್ಲಗಳೆದ ಬಳಿಕ ಆತಂಕ ದೂರವಾಯಿತು.
ನನ್ನ ಮನೆಗೆ ನಿಜವಾಗಿಯೂ ದರೋಡೆಕೋರರು ಬಂದಿದ್ದಾರೆ’ ಎಂದೇ ಪೊಲೀಸರಲ್ಲಿ ವಾದಿಸಿದ್ದರು. ಮೊಬೈಲ್ ವಶಕ್ಕೆ ಪಡೆದ ಪೊಲೀಸರ ಮೇಲೂ ರೇಗಾಡಿದ್ದ ಆಕೆ ‘ನಿಮ್ಮನ್ಯಾರು ಇಲ್ಲಿಗೆ ಬರಲು ಹೇಳಿದ್ದು. ನನ್ನ ಮೊಬೈಲ್ ಮರಳಿಸದಿದ್ದರೆ ಕೇರಳದ ಪೊಲೀಸರನ್ನು ಕರೆಸುತ್ತೇನೆ’ ಎಂದು ಇಂಗ್ಲೀಷ್ ಮತ್ತು ಮಲಯಾಳ ಭಾಷೆಯಲ್ಲಿ ಗದರಿಸಿದ್ದರು. ಸುದ್ದಿ ಪ್ರಸಾರ ಮಾಡಲು ಸ್ಥಳಕ್ಕೆ ತೆರಳಿದ ಮಾಧ್ಯಮದವರ ಮೇಲೂ ರೇಗಾಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.