LATEST NEWS
ಫೇಸ್ ಬುಕ್ ನಿಂದಾಗಿ 16 ಲಕ್ಷ ಕಳೆದುಕೊಂಡ ಮಂಗಳೂರು ಮಹಿಳೆ

ಫೇಸ್ ಬುಕ್ ನಿಂದಾಗಿ 16 ಲಕ್ಷ ಕಳೆದುಕೊಂಡ ಮಂಗಳೂರು ಮಹಿಳೆ
ಮಂಗಳೂರು ಜೂನ್ 25: ಫೇಸ್‌ಬುಕ್ ನಿಂದಾಗಿ ಬರೊಬ್ಬರಿ 16 ಲಕ್ಷವನ್ನು ಮಂಗಳೂರಿನ ಮಹಿಳೆಯೊಬ್ಬರು ಕಳೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಾಗುವ ವಂಚನೆ ಬಗ್ಗೆ ಹಲವಾರು ವರದಿಗಳು ಬಂದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ ಎನ್ನುವುದಕ್ಕೆ ಪುಷ್ಟಿಯಾಗಿ ಮತ್ತೊಂದು ಪ್ರಕರಣ ಮಂಗಳೂರಿನಲ್ಲಿ ದಾಖಲಾಗಿದೆ.
ನಗರದ ಮಹಿಳೆಯೊಬ್ಬರಿಗೆ ಮೇ 3ರಂದು ಫೇಸ್‌ಬುಕ್‌ನಲ್ಲಿ ಜಾಕ್ ಕೋಲ್ಮನ್ ಎಂಬಾತ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಕೆಲದಿನಗಳ ನಂತರ ಆಕೆ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದು, ಪರಸ್ಪರ ಪರಿಚಯ ಮಾಡಿಕೊಂಡಿದ್ದರು. ನಂತರ ಇಬ್ಬರು ನಿರಂತರ ಚಾಟಿಂಗ್ ಮಾಡಿಕೊಂಡು ಸಂಪರ್ಕದಲ್ಲಿದ್ದರು.

ಜಾಕ್ ಕೋಲ್ಮನ್ ಮಹಿಳೆಗೆ ನಿಮ್ಮ ಕುಟುಂಬಕ್ಕೊಸ್ಕರ ನಾನು ಒಂದು ಬೆಲೆಬಾಳುವ ಉಡುಗೊರೆ ಕಳುಹಿಸುವುದಾಗಿ ತಿಳಿಸಿದ್ದ, ಆದರೆ ಮಹಿಳೆ ಅದನ್ನು ನಿರಾಕರಿಸಿದ್ದರು. ಆದರೂ ಆತ ಅದು ಸುಮಾರ 20 ಸಾವಿರ ಪೌಂಡ್ ಹಣ ಇರುವ ಉಡುಗೊರೆಯಾಗಿದ್ದು ಅದನ್ನು ನೀವು ಪಡೆಯಲೇ ಬೇಕು ಎಂದು ಒತ್ತಾಯಿಸಿದ್ದ ಈ ಹಿನ್ನಲೆಯಲ್ಲಿ ಮಹಿಳೆ ಅವನ ಒತ್ತಾಯಕ್ಕೆ ಮಣಿದು ಒಪ್ಪಿದ್ದಾರೆ.
ನಂತರ ಕೆಲ ದಿನಗಳ ನಂತರ ಮೇ 09ರಂದು ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಮಹಿಳೆಗೆ ಕರೆ ಮಾಡಿ ನಿಮ್ಮ ಪಾರ್ಸೆಲ್ ಡೆಲ್ಲಿ ಏರ್‌ಪೋರ್ಟ್‌ನಲ್ಲಿದೆ. ಇದಕ್ಕೆ ನೀವು ಕೂಡಲೇ ದಂಡ ಕಟ್ಟಬೇಕು. ಇಲ್ಲದಿದ್ದರೆ ನಿಮಗೆ ತೊಂದರೆಯಾಗಬಹುದು ಎಂದು ಹೇಳಿದ್ದಾನೆ. ಇದನ್ನು ನಂಬಿದ ಮಹಿಳೆ ನಾನಾ ಹಂತದಲ್ಲಿ ಆನ್ ಲೈನ್ ಮುಖಾಂತಪರ ಒಟ್ಟು 16,69,000 ರೂ. ಹಣವನ್ನು ಆತ ಹೇಳಿದ ಖಾತೆಗೆ ಕಳುಹಿಸಿದ್ದಾರೆ.
ಕೊನೆಗೆ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದು ಮತ್ತು ಫೋನ್ ನಂಬರ್ ಕೂಡ ಸ್ವಿಚ್ ಆಫ್ ಆಗಿರುವುದು ಕಂಡು ಮಹಿಳೆಗೆ ತಾನು ಮೋಸ ಹೋಗಿರುವುದು ಗೊತ್ತಾಗಿ ಶಾಕ್ ಆಗಿದ್ದಾರೆ. ಈ ಬಗ್ಗೆ ನಗರದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.