SULLIA
ಗಂಡನ ಮನೆ ಮುಂದೆ ಯುವತಿಯ ಏಕಾಂಗಿ ಪ್ರತಿಭಟನೆ
ಸುಳ್ಯ ಜುಲೈ 13: ವಿವಾಹವಾಗಿ ಇಸ್ಲಾಂ ಮತಕ್ಕೆ ಮತಾಂತರಗೊಂಡ ಮಹಿಳೆಯೋರ್ವರನ್ನು ಆತನ ಗಂಡನ ಮನೆ ಮಂದಿ ಮನೆಯಿಂದ ಹೊರಹಾಕಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಬೆಂಗಳೂರು ನಿವಾಸಿಯಾಗಿರುವ ಮಹಿಳೆಯನ್ನು ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಯುವಕ ಆಕೆಯನ್ನು 20017 ರಲ್ಲಿ ಮದುವೆಯಾಗಿದ್ದ. ಮದುವೆಗೆ ಮೊದಲು ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ್ದ. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಮಹಿಳೆಯನ್ನು ಆಕೆಯ ಕುಟುಂಬಸ್ಥರು ಮನೆಯಿಂದ ಹೊರ ಹಾಕಿದ್ದು, ಆಕೆಗೆ ಯಾವುದೇ ಆಸ್ತಿಯಲ್ಲಿ ಪಾಲು ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.
ಇದೀಗ ಆ ಮಹಿಳೆ ಆಕೆಯ ಪತಿಯಾದ ಇಬ್ರಾಹಿಂ ಖಲೀಲ್ ಎಂಬಾತನ ಮನೆಗೆ ಬಂದಿದ್ದಾಳೆ. ಆದರೆ ಆಕೆಗೆ ಆಸ್ತಿಯಲ್ಲಿ ಯಾವುದೇ ಪಾಲು ಸಿಗುವುದಿಲ್ಲ ಎಂದು ತಿಳಿದ ಪತಿಯ ಮನೆಯವರು ಆಕೆಯನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದು, ಆಕೆಯ ಪತಿಯನ್ನೂ ಆಕೆಯಿಂದ ದೂರವಿಟ್ಟಿದ್ದಾರೆ.
ಇದನ್ನು ಪ್ರತಿಭಟಿಸಿ ಮಹಿಳೆ ಕಳೆದ ಒಂದು ವಾರದಿಂದ ಗಂಡನ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಳೆ. ಮನೆ ಮಠವನ್ನು ಬಿಟ್ಟು ಗಂಡನನ್ನು ನಂಬಿ ಬಂದಿರುವ ಮಹಿಳೆ ಇದೀಗ ಬೀದಿ ಪಾಲಾಗಿದ್ದಾಳೆ. ಮನೆಯಿಲ್ಲದ ಕಾರಣ ಇದೀಗ ಸುಳ್ಯದ ಖಾಸಗಿ ಲಾಡ್ಜ್ ಒಂದರಲ್ಲಿ ತಂಗಿದ್ದು, ನ್ಯಾಯಕ್ಕಾಗಿ ಒಬ್ಬಂಟಿಗಾಗಿ ಪರದಾಡುತ್ತಿದ್ದಾರೆ.