DAKSHINA KANNADA
ಬಡ ಮಹಿಳೆಯ ಗುಡಿಸಲಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು….!!
ಪುತ್ತೂರು ಅಕ್ಟೋಬರ್ 18: 8 ವರ್ಷ ಪ್ರಾಯದ ಮಗನೊಂದಿಗೆ ವಾಸವಿದ್ದ ಬಡ ಮಹಿಳೆಯ ಗುಡಿಸಿಲಿಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಘಟನೆ ಪುತ್ತೂರು ತಾಲ್ಲೂಕಿನ ಕುಂಬ್ರ ಸಮೀಪದ ಸಾರೆಪುಣಿಪಾದೆಡ್ಕ ಎಂಬಲ್ಲಿ ನಡೆದಿದೆ. ಪಾದೆಡ್ಕ ನಿವಾಸಿ ಪದ್ಮಾವತಿ ಹಾಗೂ ಅವರ ಎಳೆಯ ಪ್ರಾಯದ ಪುತ್ರ ವಾಸ್ತವ್ಯವಿದ್ದ, ಶೀಟ್ ಅಳವಡಿಸಿರುವ ಗುಡಿಸಲು ಮನೆಯಲ್ಲಿ ಬೆಂಕಿ ಅವಘಡ ನಡೆದಿದೆ.
ಮನೆಯೊಳಗೆ ಬ್ಯಾಗ್‌ನಲ್ಲಿ ಇರಿಸಿದ್ದ ₹ 15 ಸಾವಿರ ನಗದು ಹಣ, ಆಧಾರ್ ಕಾರ್ಡ್ ಸಹಿತ ದಾಖಲೆ ಪತ್ರಗಳು, ದಿನಸಿ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಗೋಡೆ ಇಲ್ಲದ ಗುಡಿಸಲಿನ ಸುತ್ತ ಅಳವಡಿಸಲಾಗಿದ್ದ ನೆಟ್ ಸುಟ್ಟು ಹೋಗಿದೆ. ಪದ್ಮಾವತಿ ಅವರ ಪತಿ ನಿಧನರಾಗಿದ್ದು, ಅವರು ತನ್ನ 8 ವರ್ಷದ ಪುತ್ರನೊಂದಿಗೆ ಈ ಗುಡಿಸಲಿನಲ್ಲಿ ವಾಸ್ತವ್ಯವಿದ್ದರು. ಪದ್ಮಾವತಿ ಅವರು ಶುಕ್ರವಾರ ಕೆಲಸಕ್ಕೆ ಹೋಗಿದ್ದ ವೇಳೆ ಸ್ಥಳೀಯರು ಅವರಿಗೆ ಕರೆ ಮಾಡಿ ಮನೆಗೆ ಬೆಂಕಿ ಬಿದ್ದಿರುವ ವಿಚಾರ ತಿಳಿಸಿದ್ದರು. ಕೂಡಲೇ ಅವರು ಮನೆಗೆ ಬಂದಿದ್ದರೂ ಆ ವೇಳೆಗಾಗಲೇ ಗುಡಿಸಲಿನ ಒಂದು ಭಾಗ ಬೆಂಕಿಗಾಹುತಿಯಾಗಿತ್ತು.
ಬೆಂಕಿ ಅವಘಡ ನಡೆದ ವಿಷಯ ತಿಳಿದ ಸ್ಥಳೀಯ ಸಾಮಾಜಿಕ ಕಾರ್ಯಕರ್ತ, ಎಸ್‌ಕೆಎಸ್‌ಎಸ್‌ಎಫ್ ಮುಖಂಡ ಅಶ್ರಫ್ ಸಾರೆಪುಣಿ ಜತೆಗೆ ಸ್ಥಳೀಯರಾದ ಹುಕ್ರ ಎಂಬುವರು ಬೆಂಕಿ ನಂದಿಸಲು ಶ್ರಮಿಸಿದರು. ಬಡ ಮಹಿಳೆಯ ಕೂಡಿಟ್ಟ 15 ಸಾವಿರ ಹಣ ಬೆಂಕಿಗಾಹುತಿಯಾಗಿದ್ದು, ಕೈಯಲ್ಲಿ ಒಂದು ರೂಪಾಯಿ ಹಣ ಇಲ್ಲ ಎಂದು ಮಹಿಳೆ ಗೋಳಿಟ್ಟಿದ್ದಾರೆ.