LATEST NEWS
ಭಯಾನಕ ಅಲೆಗಳ ಮಧ್ಯೆ ಯುವತಿಯ ಸಾಹಸ – ಆಳಸಮುದ್ರ ಮೀನುಗಾರಿಕೆಗೆ ತೆರಳುವ ಮೊದಲ ಯುವತಿ ಪ್ರಾಪ್ತಿ ಮೆಂಡನ್
ಮಂಗಳೂರು ಅಗಸ್ಟ್ 13: ಸಮುದ್ರದಲ್ಲಿ ಮೀನುಗಾರಿಕೆ ಮಾಡಲು ಗಂಡೆದೆ ಬೇಕು. ಸಮುದ್ರದ ಅಬ್ಬರದ ಅಲೆಗಳಿಗೆ ಎದುರಾಗಿ ಮೀನುಗಾರಿಕೆ ನಡೆಸುವುದು ಒಂದು ದೊಡ್ಡ ಸವಾಲೇ ಸರಿ. ಇಂತಹ ಸವಾಲಿನ ಕೆಲಸಕ್ಕೆ ಮಂಗಳೂರಿನ ಹುಡುಗಿಯೊಬ್ಬಳು ಸಾಥ್ ನೀಡುತ್ತಿದ್ದಾಳೆ. ಸ್ನಾತಕೊತ್ತರ ಪದವಿಧರೆಯಾದರೂ ಯಾವುದೇ ಹಮ್ಮು ಬಿಮ್ಮಿಲ್ಲದೆ ತಂದೆಯ ಜೊತೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದು, ಮೀನುಗಾರಿಕೆಗೆ ತೆರಳು ಮೊದಲ ಮಹಿಳೆಯಾಗಿದ್ದಾಳೆ.
ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಕೆಲಸ ನಿರ್ವಹಿಸುತ್ತಾರೆ ಎನ್ನುವುದುಕ್ಕೆ ಉದಾಹರಣೆ ಈ ಯುವತಿ, ಸ್ನಾತಕೋತ್ತರ ಪದವಿಧರೆ ಪ್ರಾಪ್ತಿ ಮೆಂಡನ್ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೂಲಕ ಎಲ್ಲರ ಹುಬ್ಬೆರಿಸವಂತೆ ಮಾಡಿದ್ದಾಳೆ. ಮಂಗಳೂರಿನ ಮತ್ಸ್ಯೋದ್ಯಮಿ ಕ್ಯಾಪ್ಟನ್ ಜಯಪ್ರಕಾಶ್ ಮೆಂಡನ್ ಹಾಗೂ ಕಲಾವತಿ ದಂಪತಿಯ ಪುತ್ರಿಯಾಗಿರುವ ಪ್ರಾಪ್ತಿ, ಮಂಗಳೂರು ಫಿಶರೀಸ್ ಕಾಲೇಜಿನಲ್ಲಿ ಫಿಶರೀಸ್ ಪದವಿ ಪಡೆದಿದ್ದಾರೆ. ಸದ್ಯ ಫಿಶರೀಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಫೈನಲ್ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾರೆ. ಸಮುದ್ರದ ಅಲೆ ಎದುರಿಸಿ ಮುನ್ನುಗುವ ಸಾಹಸ ಬೆಳೆಸಿಕೊಂಡಿರುವ ಪ್ರಾಪ್ತಿ, ಮುಂಜಾನೆ 4 ಗಂಟೆಗೆ ತಂದೆ ಯೊಂದಿಗೆ ದೋಣಿ ಏರಿ ಮೀನುಗಾರಿಕೆಗೆ ನಡೆಸುತ್ತಾರೆ.
ಈಕೆ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ಮೊದಲ ಯುವತಿಯಾಗಿದ್ದು, ಮಳೆಗಾಲದ ಅಪಾಯಕಾರಿ ಮೀನುಗಾರಿಕೆಯಲ್ಲೂ ಬೆಂಗ್ರೆಯ ಮೊಗವೀರ ಸಮಾಜದ ಯುವತಿ ಪ್ರಾಪ್ತಿ ಸೈ ಎನಿಸಿಕೊಂಡಿದ್ದಾರೆ. ಮೀನುಗಾರಿಕೆ ಕಾಲೇಜಿನಲ್ಲಿ ಪ್ರಾಧ್ಯಾಪಕರೂ ಆಗಿರುವ ತನ್ನ ತಂದೆ ಕ್ಯಾಪ್ಟನ್ ಜಯಪ್ರಕಾಶ್ ಮೆಂಡನ್ ಪ್ರೋತ್ಸಾಹ ದಿಂದ ಪ್ರಾಪ್ತಿ14ನೇ ವಯಸ್ಸಿನಿಂದ ಮೀನುಗಾರಿಕೆಗೆ ತೆರಳುತ್ತಾ ಬಂದಿದ್ದಾರೆ.
ತಂದೆಯ ಮಾಲೀಕತ್ವದ ‘ಜೈ ವಿಕ್ರಾಂತ್ ಬೆಂಗ್ರೆ’ ರಾಣಿ ಬಲೆ ತಂಡದ ಜತೆಗೆ ಪ್ರಾಪ್ತಿ ಮೀನುಗಾರಿಕೆಗೆ ತೆರಳುತ್ತಿದ್ದಾರೆ. ಹತ್ತು ವರ್ಷದಿಂದ ಮೀನುಗಾರಿಕೆಗೆ ತೆರಳುತ್ತಿರುವ ಪ್ರಾಪ್ತಿ, ಮಹಿಳೆ ಸಮುದ್ರಕ್ಕೆ ಹೋಗಲು ಹಿಂಜರಿಕೆ ಬೇಡ. ಪ್ರೋತ್ಸಾಹ ಇದ್ದರೆ ಎಲ್ಲವೂ ಸಾಧ್ಯ ಎಂದು ಹೇಳುತ್ತಾರೆ.
ಸಮುದ್ರದ ಅಲೆಗಳಿಗೆ ಹೆದರದೆ ಮಹಿಳೆಯೂ ಕೂಡ ಮೀನುಗಾರಿಕೆ ನಡೆಸಬಹುದು ಎಂದು ಪ್ರಾಪ್ತಿ ತೋರಿಸಿಕೊಟ್ಟಿದ್ದಾಳೆ.
You must be logged in to post a comment Login