LATEST NEWS
ಮಧ್ಯಪ್ರದೇಶ – ಹಸಿದ ಚಿರತೆ ಬಾಯಿಯಿಂದ ತನ್ನ ಮಗುವನ್ನು ರಕ್ಷಿಸಿದ ಮಹಿಳೆ

ಭೋಪಾಲ್: ಹಸಿದ ಚಿರತೆ ಬಾಯಿಯಿಂದ ತನ್ನ ಮಗುವನ್ನು ತಾಯಿಯೊಬ್ಬಳು ಕಾದಾಡಿ ರಕ್ಷಿಸಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ 500 ಕಿ.ಮೀ ದೂರದಲ್ಲಿರುವ ಸಿಧಿ ಜಿಲ್ಲೆಯ ಸಂಜಯ್ ಹುಲಿ ಸಂರಕ್ಷಿತ ಪ್ರದೇಶದ ಸಮೀಪದಲ್ಲಿರುವ ಬಾಡಿ ಜರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ತನ್ನ 8 ವರ್ಷದ ಮಗನನ್ನು ಹೊತ್ತೊಯ್ದಿದ್ದ ಚಿರತೆಯನ್ನು ಬೆನ್ನಟ್ಟಿ ಅದರೊಂದಿಗೆ ಕಾದಾಡಿ ಮಗನನ್ನು ರಕ್ಷಿಸಿಕೊಂಡು ಬಂದಿದ್ದಾರೆ. ಬೈಗಾ ಬುಡಕಟ್ಟು ಸಮುದಾಯದ ಮಹಿಳೆ ಕಿರಣ್ ಅವರು ಗುಡಿಸಲಿನ ಹೊರಗೆ ಬೆಂಕಿ ಉರಿಸಿಕೊಂಡು ತನ್ನ ಮೂವರು ಮಕ್ಕಳೊಂದಿಗೆ ಚಳಿ ಕಾಯಿಸುತ್ತಿದ್ದರು. ಇದ್ದಕ್ಕಿದ್ದಂತೆ ಚಿರತೆಯೊಂದು ದಾಳಿ ಮಾಡಿ ಮಗ ರಾಹುಲ್ ನನ್ನು ಕಚ್ಚಿಕೊಂಡು ಓಡಿ ಹೋಗಿದೆ.

ಇದ್ದಕ್ಕಿದ್ದಂತೆ ಬಂದೆರಗಿದ ಚಿರತೆ ಮಗನನ್ನು ಎಳೆದೊಯ್ದ ಘಟನೆಯಿಂದ ಕಿರಣ್ ಧೃತಿಗೆಡದೆ, ತನ್ನ ಇನ್ನಿಬ್ಬರು ಮಕ್ಕಳನ್ನು ಗುಡಿಸಲಿನ ಒಳಗೆ ಕಳುಹಿಸಿ, ಚಿರತೆಯನ್ನು ಬೆನ್ನಟ್ಟಿದ್ದಾರೆ. ಸುಮಾರು 1 ಕಿ.ಮೀ. ವರೆಗೆ ಬೆನ್ನಟ್ಟಿ ಚಿರತೆ ಬಾಯಿಯಿಂದ ಮಗುವನ್ನು ಬಿಡಿಸಿದ್ದಾರೆ. ಚಿರತೆ ದಾಳಿಯಿಂದ ಮಗುವಿಗೆ ಗಾಯವಾಗಿದೆ. ಚಿರತೆಯಿಂದ ಮಗುವನ್ನು ಬಿಡಿಸಲು ಹೋರಾಡಿದ ಸಂದರ್ಭ ಕಿರಣ್ ಕೂಡ ಗಾಯಗೊಂಡಿದ್ದಾರೆ. ಕೊನೆಗೆ ಮಗುವನ್ನು ಚಿರತೆ ಬಾಯಿಂದ ಬಿಡಿಸಿಕೊಂಡು ಹಿಂತಿರುಗುವಲ್ಲಿ ಕಿರಣ್ ಯಶಸ್ವಿಯಾಗಿದ್ದಾರೆ .