KARNATAKA
ಪರಿಚಯಸ್ಥರ ಮನೆಯಲ್ಲಿ ನೇಣಿಗೆ ಶರಣಾದ ಮಹಿಳಾ ಪೊಲೀಸ್ ಅಧಿಕಾರಿ
ಬೆಂಗಳೂರು ಡಿಸೆಂಬರ್ 17: ಬೆಂಗಳೂರಿನಲ್ಲಿ ಮಹಿಳಾ ಡಿವೈಎಸ್ ಪಿ ಅಧಿಕಾರಿಯೊಬ್ಬರು ಅನ್ನಪೂರ್ಣೇಶ್ವರಿ ನಗರದಲ್ಲಿ ಪರಿಚಯಸ್ಥರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೇಣಿಗೆ ಶರಣಾದ ಲಕ್ಷ್ಮೀ ವಿ (33) ಅವರು 2014ರ ಬ್ಯಾಚ್ ನ ಕೆಪಿಎಸ್ ಸಿ ಅಧಿಕಾರಿ. 2017ರಲ್ಲಿ ನೇಕವಾಗಿದ್ದ ಲಕ್ಷ್ಮೀ ಅವರು ಸದ್ಯ ಸಿಐಡಿ ಡಿಎಸ್ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೋಲಾರ ಮೂಲದ ಲಕ್ಷ್ಮೀ ಪ್ರೊಬೆಷನರಿ ಅವಧಿ ಮುಗಿಸಿ 2017ರಲ್ಲಿ ಡಿವೈಎಸ್ಪಿಯಾಗಿ ನೇಮಕವಾಗಿದ್ದರು. ಮೊದಲ ಹುದ್ದೆಯಲ್ಲೇ ಸಿಐಡಿಯಲ್ಲಿ ನೇಮಕವಾದ ಅವರು. 8 ವರ್ಷಗಳ ಹಿಂದೆ ನವೀನ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇರದಿದ್ದರಿಂದ ಮಾನಸಿಕವಾಗಿ ಕುಗ್ಗಿದ್ದರು ಎಂದು ಹೇಳಲಾಗಿದೆ.
ನವೀನ್ ಅಮೇಜಾನ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ. ನವೀನ್ ಬೇಕು ಎಂದು ಲಕ್ಷ್ಮೀ ಹಲವು ಬಾರಿ ಪ್ರಯತ್ನ ಪಟ್ಟಿದ್ದರಂತೆ. ಆದ್ರೆ, ನವೀನ್ ಬೆಂಗಳೂರು ಬಿಟ್ಟು ಹೈದ್ರಾಬಾದ್ಗೆ ತೆರಳಿದ್ದರು. ಈ ಹಿಂದೆಯು ಲಕ್ಷ್ಮೀ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿ ಅಸ್ಪತ್ರೆಗೆ ದಾಖಲಾಗಿದ್ದರಂತೆ. ಈ ವೇಳೆ ಮುಂದೆ ಮದ್ಯಸೇವನೆ ಮಾಡದಂತೆ ವೈದ್ಯರು ತಿಳಿಸಿದ್ದರು. ಆದರೆ, ಸಂಸಾರದ ವಿಚಾರವಾಗಿ ಲಕ್ಷ್ಮೀ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಒಮ್ಮೆ ಖಿನ್ನತೆಗೆ ಕೌನ್ಸಲಿಂಗ್ ಸಹ ಮಾಡಸಲಾಗಿದೆ. ಆದರೂ ತೀವ್ರವಾಗಿ ನೊಂದಿದ್ದ ಲಕ್ಷ್ಮೀ ಡಿಸೆಂಬರ್ 16 ರಂದು ರಾತ್ರಿ ಪರಿಚಯಸ್ಥರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸದ್ಯ ಮೃತ ದೇಹವನ್ನು ವಿಕ್ಟೋರಿಯಾ ಅಸ್ಪತ್ರೆಗೆ ರವಾನಿಸಲಾಗಿದ್ದು, ಹತ್ತು ಗಂಟೆ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಕುಟುಂಬಸ್ಥರಿಗೆ ಮೃತ ದೇಹ ಹಸ್ತಾಂತರಿಸಲಾಗುತ್ತದೆ.