BELTHANGADI
ಮಹಿಳಾ ಪೊಲೀಸ್ ಸಿಬ್ಬಂದಿಯ ಮಾನವೀಯತೆಯ ಮುಖ
ಮಹಿಳಾ ಪೊಲೀಸ್ ಸಿಬ್ಬಂದಿಯ ಮಾನವೀಯತೆಯ ಮುಖ
ಕಡಬ ಎಪ್ರಿಲ್ 11: ಸಾದಾ ಕಠೋರ ಮನಸ್ಸು ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದ್ದ ಪೊಲೀಸರ ಮಾನವೀಯತೆಯ ಗುಣಗಳು ಕೆಲವೊಂದು ಬಾರಿ ಬೆಳಕಿಗೆ ಬಂದರೆ, ಇನ್ನು ಕೆಲವು ಹಾಗೆಯೇ ಮರೆಯಾಗುತ್ತವೆ.
ಇಂಥಹುದೇ ಮಾನವೀಯತೆಯ ಸಾಕಾರ ಮೂರ್ತಿಗಳಾಗಿ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮಹಿಳಾ ಪೋಲೀಸರು ಮೂಡಿ ಬಂದಿದ್ದಾರೆ. ಬಡತನದ ಬೇಗೆಯಿಂದ ಬೇಯುತ್ತಿದ್ದ, ಮನೆಗೆ ಬೇಕಾದ ಅಗತ್ಯಸಾಮಾಗ್ರಿಗಳನ್ನು ಕೊಂಡೊಯ್ಯಲಾಗದೆ, ಕಡಬದ ಬೀದಿಯಲ್ಲಿ ತಿರುಗಾಡುತ್ತಿದ್ದ ವೃದ್ದೆಯೊಬ್ಬರಿಗೆ ಈ ಮಹಿಳಾ ಪೇದೆಯರು ತಮ್ಮ ಹಣದಿಂದ ಮನೆ ಸಾಮಾಗ್ರಿಗಳನ್ನು ಖರೀದಿಸಿಕೊಟ್ಟಿದ್ದಾರೆ.
ಕಡಬ ಪೋಲೀಸ್ ಠಾಣೆಯ ಭಾಗ್ಯಮ್ಮ ಮತ್ತು ನಾಗಲಕ್ಷಿ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ವೃದ್ದೆಯ ಈ ಸಂಕಷ್ಟ ಬೆಳಕಿಗೆ ಬಂದಿತ್ತು. ತಕ್ಷಣವೇ ಸ್ಪಂದಿಸಿದ ಇಬ್ಬರೂ ತಮ್ಮ ಜೇಬಲ್ಲಿದ್ದ ಹಣವನ್ನು ಒಟ್ಟುಗೂಡಿಸಿ ವೃದ್ದೆಯ ಮನೆಗೆ ಬೇಕಾದಷ್ಟು ಆಹಾರ ಪದಾರ್ಥಗಳನ್ನು ಖರೀದಿಸಿ ಕೊಟ್ಟಿದ್ದಾರೆ. ಅಲ್ಲದೆ ವೃದ್ದೆಯನ್ನು ಅಟೋ ಮೂಲಕ ಮನೆಗೆ ತಲುಪಿಸುವ ಕೆಲಸವನ್ನೂ ಮಾಡಿದ್ದಾರೆ.
ಮಹಿಳಾ ಪೋಲೀಸರು ವೃದ್ದೆಗೆ ಸಹಾಯ ಮಾಡುತ್ತಿರುವ ಸಂದರ್ಭದಲ್ಲಿ ಯಾರೋ ಮೊಬೈಲ್ ಮೂಲಕ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಪೋಲೀಸರಿಗೆ ಭಾರೀ ಪ್ರಶಂಸೆಯೂ ವ್ಯಕ್ತವಾಗುತ್ತಿದೆ.