KARNATAKA
ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; ಜೀನಿ ಮಾಲೀಕ ದಿಲೀಪ್ ಕುಮಾರ್ ವಿರುದ್ಧ ಎಫ್‌ಐಆರ್

ತುಮಕೂರು, ಏಪ್ರಿಲ್ 26: ಜೀನಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಜೀನಿ ಮಾಲೀಕ ದಿಲೀಪ್ ಕುಮಾರ್ ವಿರುದ್ಧ ಕಳ್ಳಂಬೆಳ್ಳ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜಿಲ್ಲೆಯ ಶಿರಾ ತಾಲೂಕಿನ ಯರಗುಂಟೆಯಲ್ಲಿರುವ ಜೀನಿ ಕಂಪನಿಯಲ್ಲಿ ಕೆಲಸಕ್ಕೆ ಬರುವ ಮೇಘನ ಎಂಬಾಕೆಗೆ ದಿಲೀಪ್ ಕುಮಾರ್ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಏಪ್ರಿಲ್ 19 ರಂದು ಸ್ವಲ್ಪ ಕೆಲಸವಿದೆ ಎಂದು ಜೀನಿ ಕಂಪನಿ ಶೆಡ್ ಗೆ ಕರೆದು ಕೈಹಿಡಿದು ಎಳೆದಾಡಿ ದಿಲೀಪ್ ಕುಮಾರ್ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ನನಗೆ ಸಹಕರಿಸು ನಿನ್ನನ್ನು ರಾಣಿಯ ರೀತಿ ನೋಡಿಕೊಳ್ಳುತ್ತೇನೆ ಎಂದು ಆಮಿಷವೊಡ್ಡಿದ್ದಾರೆ. ಒಂದು ವೇಳೆ ಸಹಕರಿಸದಿದ್ದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ ನೊಂದ ಮಹಿಳೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಏ. 24 ರಂದು ಎಫ್‌ಐಆರ್ ದಾಖಲಾಗಿದೆ.

ಈಗಾಗಲೇ ಪ್ರಾಥಮಿಕ ತನಿಖೆ ಮುಗಿಸಿರುವ ಪೊಲೀಸರು, ಸಂತ್ರಸ್ತೆಯನ್ನು ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ. ಎಫ್‌ಐಆರ್ ದಾಖಲಾಗಿರುವ ಕಾರಣ, ಜೀನಿ ಸಂಸ್ಥೆ ಮಾಲೀಕ ದಿಲೀಪ್ ಕುಮಾರ್ ಅವರನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಳ್ಳು ಪೊಲೀಸರು ಮುಂದಾಗಿದ್ದಾರೆ.
ಯಾವುದೇ ಒತ್ತಡಗಳಿಗೆ ಮಣಿಯದೆ ಆರೋಪಿಯನ್ನು ಪೊಲೀಸರು ಬಂಧಿಸಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳದಿದ್ದರೆ ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು. ಕಂಪನಿಯಲ್ಲಿ ಕೆಲಸ ಮಾಡುವ ಅನೇಕ ಬಡ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು ಈ ಬಗ್ಗೆಯೂ ತನಿಖೆ ನಡೆಸಬೇಕೆಂದು ನೊಂದ ಮಹಿಳೆ ಆಗ್ರಹಿಸಿದ್ದಾರೆ.
ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಜೀನಿ ಮಾಲೀಕ ದಿಲೀಪ್ ಕುಮಾರ್, ಜೀನಿ ಸಂಸ್ಥೆಯ ಬೆಳವಣಿಗೆಯನ್ನು ಸಹಿಸದ ಕೆಲವು ವ್ಯಕ್ತಿಗಳು, ಮಹಿಳೆಯರನ್ನು ಮುಂದಿಟ್ಟುಕೊಂಡು ಕುತಂತ್ರ ನಡೆಸುತ್ತಿದ್ದಾರೆ. ತನ್ನ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂದು ತಿಳಿಸಿದ್ದಾರೆ.