UDUPI
ಇಚ್ಛಾಶಕ್ತಿಯಿಂದ ಯಶಸ್ಸು- ಜಿಲ್ಲಾಧಿಕಾರಿ
ಇಚ್ಛಾಶಕ್ತಿಯಿಂದ ಯಶಸ್ಸು- ಜಿಲ್ಲಾಧಿಕಾರಿ
ಉಡುಪಿ, ಸೆಪ್ಟೆಂಬರ್ 16 : ದೃಢ ಸಂಕಲ್ಪ ಹೊಂದಿ, ಇಚ್ಚಾಶಕ್ತಿಯಿಂದ ಕಾರ್ಯ ನಿರ್ವಹಿಸಿದರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧ್ಯ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ. ಅವರು ಶನಿವಾರ, ಉಡುಪಿ ಜಿಲ್ಲಾ ಗ್ರಂಥಾಲಯದಲ್ಲಿ, ಯುಪಿಎಸ್‍ಸಿ ಮತ್ತು ಕೆಪಿಎಸ್‍ಸಿ ಹುದ್ದೆಗಳ ಪರೀಕ್ಷಾ ತರಬೇತಿಗೆ ಆಯ್ಕೆಯಾಗಿರುವ ಜಿಲ್ಲೆಯ ಅಭ್ಯರ್ಥಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಾಗರಿಕ ಸೇವಾ ಪರೀಕ್ಷೆಗಳಿಗೆ ಜಿಲ್ಲೆಯ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಏರ್ಪಡಿಸಿ, ಅದರಲ್ಲಿ ಉತ್ತೀರ್ಣರಾದ ಆಸಕ್ತ 50 ಅಭ್ಯಥಿಗಳಿಗೆ ಜಿಲ್ಲಾಡಳಿತದ ವತಿಯಿಂದ ಉಚಿತ ತರಬೇತಿ ನೀಡಲು ಕ್ರಮ ಕೈಗೊಂಡಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಬುದ್ದಿವಂತಿಕೆಯ ಜೊತೆಗೆ ಸಾಧಿಸುವ ಛಲ, ಮಹತ್ವಾಕಾಂಕ್ಷೆ ಹೊಂದಿದ್ದರೆ , ನಾಗರೀಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಪಡೆಯಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ದಿನಪತ್ರಿಕೆಗಳನ್ನು ಓದುವ ಬಗ್ಗೆ, ಪ್ರಚಲಿತ ವಿದ್ಯಮಾನಗಳನ್ನು ಅರಿಯುವ ಬಗ್ಗೆ ಹಾಗೂ ಪ್ರಾಯೋಗಿಕ ಪರೀಕ್ಷೆ ಏರ್ಪಡಿಸುವ ಮೂಲಕ ನಾಗರೀಕ ಸೇವಾ ಪರೀಕ್ಷೆಗೆ ತರಬೇತಿ ನೀಡಲಾಗುವುದು, ಅಲ್ಲದೇ ಅಭ್ಯಥಿಗಳು ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ತರಬೇತಿಯಲ್ಲಿ ನೀಡುವ ಪಠ್ಯಕ್ರಮವನ್ನು ಅಭ್ಯಾಸ ಮಾಡಿದಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಪಡೆಯಬಹುದು, ನಾಗರೀಕ ಸೇವಾ ಪರೀಕ್ಷೆಯಲ್ಲಿ ಎದುರಿಸುವ ಪ್ರಯತ್ನಗಳು ಮುಖ್ಯವಲ್ಲ, ನಾಗರೀಕ ಸೇವೆಗೆ ಆಯ್ಕೆಯಗುವುದು ಮುಖ್ಯ ಎಂದು ತಿಳಿಸಿದರು.
ಜಿಲ್ಲಾ ಗ್ರಂಥಾಲಯದಲ್ಲಿ ಪ್ರಾರಂಭಿಸಿರುವ ಈ ತರಬೇತಿ ಕೇಂದ್ರದಲ್ಲಿ , ಪರೀಕ್ಷೆಗೆ ಅಗತ್ಯವಿರುವ ಪುಸ್ತಕಗಳ ಲಭ್ಯವಿದ್ದು, ಅಭ್ಯರ್ಥಿಗಳಿಗಾಗಿ ಇಂಟರ್ನೆಟ್ ಸಂಪರ್ಕದೊಂದಿಗೆ 5 ಕಂಪ್ಯೂಟರ್ ಗಳನ್ನು ಅಳವಡಿಸಲಾಗುವುದು, ಕೇಂದ್ರದಲ್ಲಿ ಯಾವುದೇ ಕೊರತೆಗಳಿದ್ದರೆ ಗಮನಕ್ಕೆ ತರುವಂತೆ ಹೇಳಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಸಾರ್ವಜನಿಕ ಸೇವೆಯಲ್ಲಿರುವ ಸ್ಥಳೀಯ ಅಧಿಕಾರಿಗಳ ಕೊರತೆಯನ್ನು ತುಂಬುವಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಈ ಪ್ರಯತ್ನದೊಂದಿಗೆ, ಯುವ ಜನತೆಯು ಸಾರ್ವಜನಿಕ ಸೇವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳಲು ಇದು ಸಹಾಯಕಾರಿ ಎಂದು ಹೇಳಿದರು.