DAKSHINA KANNADA
ಶಿರಾಢಿಘಾಟ್ ರಸ್ತೆಗೆ ನಡೆಯುತ್ತಿದೆಯೇ 60 ಕೋಟಿಯ ಮತ್ತೊಂದು ಡೀಲ್, ಕಾಮಗಾರಿ ನೆಪದಲ್ಲಿ ರಸ್ತೆಗೆ ಮತ್ತೆ ಸೀಲ್ !
ಶಿರಾಢಿಘಾಟ್ ರಸ್ತೆಗೆ ನಡೆಯುತ್ತಿದೆಯೇ 60 ಕೋಟಿಯ ಮತ್ತೊಂದು ಡೀಲ್, ಕಾಮಗಾರಿ ನೆಪದಲ್ಲಿ ರಸ್ತೆಗೆ ಮತ್ತೆ ಸೀಲ್ !
ಪುತ್ತೂರು, ಸೆಪ್ಟಂಬರ್ 1: ರಾಷ್ಟ್ರೀಯ ಹೆದ್ದಾರಿ 75 ರ ಶಿರಾಢಿಘಾಟ್ ರಸ್ತೆಯನ್ನು ಆದಷ್ಟು ಬೇಗ ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕೆಂಬ ಒತ್ತಡಗಳು ಕೇಳಿ ಬರಲಾರಂಭಿಸಿದೆ.
ಈ ಸಂಬಂಧ ಈಗಾಗಲೇ ಹೋರಾಟ ಸಮಿತಿಗಳೂ ರಚನೆಯಾಗಿದ್ದು, ಸೆಪ್ಟಂಬರ್ 3 ರಂದು ಗುಂಡ್ಯಾ ಚೆಕ್ ಪೋಸ್ಟ್ ಬಳಿ ವಿವಿಧ ಸಂಘಟನೆಗಳು ಸೇರಿ ಮುಂದಿನ ಹೋರಾಟದ ರೂಪುರೇಶೆಗಳನ್ನು ಸಿದ್ಧಪಡಿಸಲಿದೆ.
ಪಶ್ಟಿಮಘಟ್ಟ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಶಿರಾಢಿಘಾಟ್ ರಸ್ತೆಯ ಸುಮಾರು 12 ಕಡೆಗಳಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ ಹಾಗೂ ಭೂ ಕುಸಿತ ಸಂಭವಿಸಿತ್ತು.
ಕಾಂಕ್ರೀಟ್ ರಸ್ತೆಯ ಕಾಮಗಾರಿ ನಡೆಸುವ ಸಂದರ್ಭದಲ್ಲಿ ನದಿ ಬದಿಯಲ್ಲಿ ರಸ್ತೆ ಹಾದುಹೋಗುವ ಭಾಗಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಸೇಫ್ಟಿ ವಾಲ್ ಗಳು ನೀರು ಪಾಲಾಗಿದ್ದು, ಈ ಭಾಗಗಳಲ್ಲಿ ಹೊಸದಾಗಿ ಹಾಕಿದ ಕಾಂಕ್ರೀಟ್ ರಸ್ತೆಗೂ ಹಾನಿಯಾಗಿವೆ.
ಈ ನಡುವೆ ದಕ್ಷಿಣಕನ್ನಡ ಜಿಲ್ಲೆಯ ಭಾಗದಿಂದ ಹೋಗುವ ವಾಹನಗಳನ್ನು ಮಾತ್ರ ತಡೆಹಿಡಿಯಲಾಗುತ್ತಿದ್ದು, ಸಕಲೇಶಪುರ ಕಡೆಯಿಂದ ಬರುವ ವಾಹನಗಳು ನಿರಂತರವಾಗಿ ಓಡಾಟ ನಡೆಸುತ್ತಿದೆ ಎನ್ನುವ ಆರೋಪವೂ ಸ್ಥಳೀಯರಿಂದ ಕೇಳಿ ಬರುತ್ತಿದೆ.
ಈ ನಡುವೆ ಘಾಟ್ ರಸ್ತೆಗೆ ಮತ್ತೆ 60 ಕೋಟಿ ರೂಪಾಯಿಗಳ ಕಾಮಗಾರಿಯನ್ನು ನಡೆಸಲು ಯೋಜನೆ ರೂಪಿಸಲಾಗುತ್ತಿದೆ ಎನ್ನುವ ಮಾತೂ ಕೇಳಿ ಬರುತ್ತಿದೆ.
ಘಾಟ್ ರಸ್ತೆಯ ಸುತ್ತಮುತ್ತ ಮಣ್ಣು ತೆಗೆಸಲು ಹಾಗೂ ರಸ್ತೆಯ ಎರಡೂ ಕಡೆಗಳಲ್ಲಿ ತಡೆಗೋಡೆ ನಿರ್ಮಿಸುವುದಕ್ಕೋಸ್ಕರ ಈ ಹಣವನ್ನು ವಿನಿಯೋಗಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆದಷ್ಟು ಬೇಗ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಲ್ಲಿ ಆ ಹಣದಲ್ಲಿ ಕಮಿಷನ್ ಕೂಡಾ ಪಡೆಯಬಹುದು ಎನ್ನುವ ಲೆಕ್ಕಾಚಾರದಲ್ಲಿ ಕೆಲವು ಜನಪ್ರತಿನಿಧಿಗಳಿದ್ದಾರೆ ಎನ್ನುವ ವಿಚಾರವೂ ತಿಳಿದು ಬಂದಿದೆ.
ಈ ಕಾರಣಕ್ಕಾಗಿ ಶಿರಾಢಿಘಾಟ್ ರಸ್ತೆಯನ್ನು ಮತ್ತೆ ನಾಲ್ಕು ತಿಂಗಳು ಮುಚ್ಚಲಾಗುತ್ತದೆ ಎನ್ನುವ ಹೇಳಿಕೆಯನ್ನೂ ನೀಡಲಾಗುತ್ತಿದೆ.
ಶಿರಾಢಿಘಾಟ್ ರಸ್ತೆಯ ಕೆಲವು ಭಾಗಗಳು ಮಾತ್ರ ಕೊಂಚ ಅಪಾಯಕಾರಿಯಾಗಿದ್ದು, ಈ ಜಾಗದಲ್ಲಿ ಏಕಮುಖ ಚಾಲನೆಗೆ ವ್ಯವಸ್ಥೆ ಮಾಡುವ ಮೂಲಕ ಲಘು ವಾಹನಗಳಿಗೆ ಅವಕಾಶ ನೀಡಬಹುದು ಎನ್ನುವ ಅಭಿಪ್ರಾಯವನ್ನು ಈಗಾಗಲೇ ಘಾಟ್ ರಸ್ತೆಯನ್ನು ವೀಕ್ಷಣೆ ಮಾಡಿದ ಇಂಜಿನಿಯರ್ ಗಳು ನೀಡಿದ್ದಾರೆ.
ಇಷ್ಟೆಲ್ಲಾ ವ್ಯವಸ್ಥೆಗಳಾದ ಬಳಿಕವೂ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಲು ಮೀನ ಮೇಷ ಎಣಿಸುತ್ತಿರುವುದರ ಹಿಂದಿನ ಮರ್ಮವೇನು ಎನ್ನುವುದು ತಿಳಿದು ಬರಬೇಕಿದೆ.
ಪ್ರಾಕೃತಿಕ ವಿಕೋಪದ ಹೆಸರಿನಲ್ಲಿ ಮತ್ತೊಂದು ಹಣದ ಲೂಟಿಗೆ ಪ್ಲಾನ್ ಸಿದ್ಧವಾಗುತ್ತಿದೆಯೇ ಎನ್ನುವ ಆರೋಪಗಳೂ ಕೇಳಿ ಬರುತ್ತಿದೆ.