Connect with us

LATEST NEWS

ಹಾವಿನಿಂದ ಕಚ್ಚಿಸಿ ಪತ್ನಿ ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಕೇರಳ : ವಿಶೇಷಚೇತನ ಪತ್ನಿಯನ್ನು ಹಾವಿನಿಂದ ಕಚ್ಚಿಸಿ ಕೊಲೆ ಮಾಡಿದ ಪತಿ ಆರೋಪಿ ಸೂರಜ್ ಗೆ ಕೇರಳದ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


ನಾಗರಹಾವಿನಿಂದ ಕಚ್ಚಿಸಿ ಪತ್ನಿಯನ್ನು ಸೂರಜ್‌ ಕೊಲೆ ಮಾಡಿದ್ದ ಪ್ರಕರಣವು ಕೇರಳದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಮೊದಲ ಬಾರಿ ಮಂಡಲದ ಹಾವು ಬಳಸಿ ಕೊಲೆಗೆ ವಿಫಲ ಯತ್ನವನ್ನು ನಡೆಸಿದ್ದ ಅರೋಪ ಸೂರಜ್‌ ಮೇಲಿತ್ತು. ಎರಡನೇ ಬಾರಿ ನಾಗರ ಹಾವು ಬಳಸಿ ಆಕೆ ಸಾವಿಗೆ ಕಾರಣನಾಗಿದ್ದ. 2020ರ ಮೇ 7ರಂದು ನಾಗರ ಹಾವು ಕಡಿತದಿಂದ ಉತ್ರಾ ಸಾವನ್ನಪ್ಪಿದ ಬಳಿಕ ಆಕೆಯ ಕುಟುಂಬದವರು ವರದಕ್ಷಿಣೆ ಕಿರುಕುಳ ಆರೋಪದ ಪ್ರಕರಣವನ್ನು ಸೂರಜ್‌ ವಿರುದ್ಧ ದಾಖಲಿಸಿದ್ದರು. ನಂತರ ಸಾರ್ವಜನಿಕವಾಗಿ ಹೇಳಿಕೆ ನೀಡಿದ ಸೂರಜ್, ಹಾವು ಕಡಿತದಿಂದ ಉತ್ರಾ ಮೃತಪಟ್ಟಿದ್ದಾಳೆ ಎಂದಿದ್ದ.

ಸೂರಜ್ ಎಸ್ ಕುಮಾರ್ ವಿರುದ್ಧ ಕೊಲೆ, ವಿಷ ಪ್ರಾಶನ, ಸಾಕ್ಷ್ಯ ನಾಶ ಪ್ರಕರಣ ದಾಖಲಾಗಿತ್ತು ಅಲ್ಲದೆ ತನ್ನ 25 ವರ್ಷದ ಪತ್ನಿ ಉತ್ರಾ ಅವರನ್ನು ಮೊದಲ ಬಾರಿಗೆ ಹಾವಿನಿಂದ ಕಚ್ಚಿಸಿ ಸಾಯಿಸಲು ಯತ್ನಿಸಿದ್ದನ್ನೂ ಕೊಲೆ ಎಂದು ಪರಿಗಣಿಸಿದ ನ್ಯಾಯಾಲಯ, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ-VI ಮನೋಜ್ ಎಂ ಅವರು ಶಿಕ್ಷೆಯ ತೀರ್ಪನ್ನು ಪ್ರಕಟಿಸಿದ್ದಾರೆ. ‘ಇದೊಂದು ಅಪರೂಪದ ಪ್ರಕರಣವಾಗಿದೆ. ಅಪರಾಧಿ ವಯಸ್ಸು 28 ವರ್ಷಗಳಾಗಿರುವುದರಿಂದ, ಮರಣದಂಡನೆಯ ಬದಲಿಗೆ ಜೀವಾವಧಿ ಶಿಕ್ಷೆ ನೀಡಲು ತೀರ್ಮಾನಿಸಿದರು’ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಜಿ ಮೋಹನರಾಜ್ ನ್ಯಾಯಾಲಯದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

ಆರೋಪಿ ಕುಮಾರ್‌ಗೆ, ಕೊಲೆ ಆರೋಪ ಸಾಬೀತಾಗಿದ್ದಕ್ಕೆ ಜೀವಾವಧಿ ಶಿಕ್ಷೆ, ಕೊಲೆ ಯತ್ನಕ್ಕೆ ಜೀವಾವಧಿ ಶಿಕ್ಷೆ ಹಾಗೂ ವಿಷ ಉಣಿಸಿದ್ದಕ್ಕೆ 10 ವರ್ಷ ಹಾಗೂ ಸಾಕ್ಷ್ಯ ನಾಶಕ್ಕಾಗಿ 7 ವರ್ಷಗಳ ಕಾಲ ನ್ಯಾಯಾಲಯ ಶಿಕ್ಷೆ ವಿಧಿಸಿದೆ ಎಂದು ಎಸ್‌ಪಿಪಿ ತಿಳಿಸಿದರು.
ವಿಷಪ್ರಾಶನ ಮತ್ತು ಸಾಕ್ಷ್ಯಾಧಾರಗಳ ನಾಶಕ್ಕಾಗಿ ವಿಧಿಸಿದ ಶಿಕ್ಷೆಯನ್ನು ಮೊದಲು ನೀಡಬೇಕು ಎಂದು ನ್ಯಾಯಾಲಯ ನಿರ್ದಿಷ್ಟವಾಗಿ ನಿರ್ದೇಶಿಸಿದೆ ಎಂದು ಅವರು ಹೇಳಿದರು. ಒಟ್ಟು 17 ವರ್ಷಗಳ ಸೆರೆವಾಸ ಮತ್ತು ನಂತರ ಆತನ ಜೀವಾವಧಿ ಶಿಕ್ಷೆ ಆರಂಭವಾಗುತ್ತದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *