LATEST NEWS
ಬಿಎಸ್ಸೆನ್ನೆಲ್ ಈ ಪರಿ ಸೊರಗಿದ್ದೇಕೆ, ಯಾರು ಕಾರಣ ?!
ಬಿಎಸ್ಸೆನ್ನೆಲ್ ಈ ಪರಿ ಸೊರಗಿದ್ದೇಕೆ, ಯಾರು ಕಾರಣ ?!
ಮಂಗಳೂರು : ಬಿಎಸ್ಸೆನ್ನೆಲ್ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿ. ಇನ್ನೇನು ಬಿಎಸ್ಸೆನ್ನೆಲ್ ಮುಚ್ಚಿ ಹೋಗಲಿದೆ, ಕೇಂದ್ರದಲ್ಲಿ ಮೋದಿ ಸರಕಾರದ ಆರ್ಥಿಕ ನೀತಿಯಿಂದಾಗಿ ಬಿಎಸ್ಸೆನ್ನೆಲ್ ಗೆ ಈ ಸ್ಥಿತಿ ಬಂದಿದೆ ಅನ್ನೋ ಮಾತು ಕೇಳಿಬರುತ್ತಿದೆ. ಹಾಗಾದ್ರೆ, ಬಿಎಸ್ಸೆನ್ನೆಲ್ ಜಾತಕ ಚೂರು ನೋಡಲೇಬೇಕು.
ದೇಶಾದ್ಯಂತ 50 ಸಾವಿರಕ್ಕೂ ಹೆಚ್ಚು ಪ್ರಮುಖ ಮೊಬೈಲ್ ಟವರ್ ಗಳನ್ನು ಹೊಂದಿರುವ ಬಿಎಸ್ಸೆನ್ನೆಲ್ ನಲ್ಲಿ ಸದ್ಯಕ್ಕೆ 1.76 ಲಕ್ಷ ನೌಕರರಿದ್ದಾರೆ. 89 ಸಾವಿರ ಕೋಟಿ ರೂಪಾಯಿ ಮೌಲ್ಯದ ಕಟ್ಟಡ ಇನ್ನಿತರ ಸ್ಥಿರಾಸ್ತಿಯನ್ನು ಹೊಂದಿರುವ ಬಿಎಸ್ಸೆನ್ನೆಲ್ ನಷ್ಟದ ಹಾದಿ ಹಿಡಿದಿದ್ದು ಯಾಕೆ ಅನ್ನೋದನ್ನು ನೋಡುತ್ತಾ ಹೋದರೆ, ಸ್ವಯಂಕೃತ ಅಪರಾಧ ಅನ್ನುವುದೇ ಹೆಚ್ಚು ಕಾಣ ಸಿಗುವುದು.
2005-06ರಲ್ಲಿ ವಾರ್ಷಿಕ ಹತ್ತು ಸಾವಿರ ಕೋಟಿ ರೂಪಾಯಿ ಲಾಭದಲ್ಲಿ ವಹಿವಾಟು ನಡೆಸುತ್ತಿದ್ದ ಈ ಕಂಪನಿ, ನಷ್ಟದ ಹಾದಿ ಹಿಡಿದಿದ್ದು 2009-10ರ ಬಳಿಕ. ಅದಕ್ಕೆ ಸರಕಾರದ ಆರ್ಥಿಕ ನೀತಿಗಳಿಗಿಂತಲೂ ಸಾರ್ವಜನಿಕ ವಲಯದ ಕಂಪನಿಯ ಆಯಕಟ್ಟಿನ ಜಾಗಗಳಲ್ಲಿ ಕುಳಿತ ಅಧಿಕಾರಿಗಳ ಕೊಡು- ಕೊಳ್ಳುವಿಕೆಯ ನೀತಿಗಳೇ ಹೆಚ್ಚು ಕಾರಣವಾಗಿತ್ತು. ಆವಾಗಷ್ಟೇ ಭಾರ್ತಿ ಏರ್ಟೆಲ್ ಭಾರತದಲ್ಲಿ ದೇಶಾದ್ಯಂತ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿತ್ತು.
ಇನ್ನೂ ಅಂಬೆಗಾಲು ಇಡುತ್ತಿದ್ದ ಏರ್ಟೆಲ್ ಮೊದಲು ಮಾಡಿದ್ದೇ ದೇಶಾದ್ಯಂತ ಕಬಂಧ ಬಾಹು ಚಾಚಿದ್ದ ಬಿಎಸ್ಸೆನ್ನೆಲ್ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ತಂತ್ರ. ಅದಕ್ಕಾಗಿ ನಾನಾ ತರದ ಕಸರತ್ತುಗಳನ್ನು ಮಾಡಿದ್ರೂ ಕೈಗೂಡದೆ ಸೋತಾಗ ಕಂಡಿದ್ದೇ ಎದುರಾಳಿ ಕಂಪನಿಯ ಅಧಿಕಾರಿಗಳನ್ನು ಕೊಳ್ಳುವ ತಂತ್ರಗಾರಿಕೆ.
ಬಿಎಸ್ಸೆನ್ನೆಲ್ ಟವರ್ ಅಡಿಯಲ್ಲಿ ನಿಂತು ಕರೆ ಮಾಡಿದ್ರೂ, ನಾಟ್ ರೀಚೆಬಲ್ ಆಗುತ್ತಿದ್ದ ಗ್ರಾಹಕನಿಗೆ ಏರ್ಟೆಲ್ ಸುಲಭದ ತುತ್ತಾಗಿತ್ತು. ಎದುರಾಳಿ ಕಂಪನಿಗಳಿಂದ ಕಾಸು ಪಡೆದು ತನಗೆ ಅನ್ನ ಕೊಟ್ಟ ಸರಕಾರದ ಅಂಗಸಂಸ್ಥೆಯದ್ದೇ ಸಿಗ್ನಲ್ ಡೌನ್ ಮಾಡಿಕೊಡುತ್ತಿದ್ದ ಬಿಎಸ್ಸೆನ್ನೆಲ್ ಟೆಕ್ನಿಕಲ್ ಇಂಜಿನಿಯರುಗಳು, ಲಕ್ಷ ಎಣಿಸುತ್ತಾ ಮ್ಯಾನೇಜ್ಮೆಂಟ್ ಹೆಸರಲ್ಲಿ ಅಧಿಕಾರ ಚಲಾಯಿಸುತ್ತಿದ್ದ ಆಫೀಸರುಗಳು ವ್ಯವಸ್ಥಿತವಾಗಿ ಗ್ರಾಹಕರು ಖಾಸಗಿ ಕಂಪನಿಯತ್ತ ಮುಖ ಮಾಡಲು ಕಾರಣವಾಗಿದ್ದರು.
ಇದೇ ಕಾರಣಕ್ಕೆ ಅದೇ ಮೊದಲ ಬಾರಿಗೆ ನಷ್ಟದ ಹಾದಿ ಹಿಡಿದ ಬಿಎಸ್ಸೆನ್ನೆಲ್ ಮತ್ತೆ ಮೇಲೆ ಬರಲೇ ಇಲ್ಲ. 2013ರಲ್ಲಿ ಆಗಿನ ಟೆಲಿಕಾಂ ಸಚಿವರಾಗಿದ್ದ ಕಪಿಲ್ ಸಿಬಲ್, ಬಿಎಸ್ಸೆನ್ನೆಲ್ ದೇಶದ ಆಸ್ತಿ. ದೇಶದ ಬಂಗಾರ ಅನ್ನುತ್ತಲೇ ಸಂಸ್ಥೆಯ ಲಾಭಕ್ಕಾಗಿ ಹೊಸ ಯೋಜನೆಗಳನ್ನು ಜಾರಿಗೊಳಿಸಲು ಸೂಚಿಸಿದ್ದರು.
ಆದರೆ, ಸಾರ್ವಜನಿಕ ವಲಯದ ಬಿಎಸ್ಸೆನ್ನೆಲ್ ಮ್ಯಾನೇಜ್ಮೆಂಟ್, ಖಾಸಗಿ ರಂಗದ ಮೊಬೈಲ್ ಕಂಪನಿಗಳನ್ನು ಎದುರಿಸುವ ಮಟ್ಟಿಗೆ ಯೋಜನೆಗಳನ್ನು ಜಾರಿಗೆ ತರಲಿಲ್ಲ. ಏರ್ಟೆಲ್, ಐಡಿಯಾ ಕಂಪನಿಗಳು ಐದು ವರ್ಷಗಳ ಹಿಂದೆ 3ಜಿ ಸ್ಪೀಡ್ ಅನುಷ್ಠಾನಕ್ಕೆ ತಂದಾಗ, ಬಿಎಸ್ಸೆನ್ನೆಲ್ ಕೂಡ ಸ್ಪರ್ಧೆ ನೀಡಲು ಮುಂದಾಗಿತ್ತು. ಕೇವಲ 350 ರೂಪಾಯಿಗೆ ಮೂರು ತಿಂಗಳ ಪ್ಯಾಕ್ ನೀಡುವ ಯೋಜನೆ ತಂದಿತ್ತು. ಆದರೆ, ಏರ್ಟೆಲ್ ಎದುರು ಬಿಎಸ್ಸೆನ್ನೆಲ್ ಸ್ಪೀಡ್ ಗ್ರಾಹಕರ ಕೈಗೇ ಎಟುಕದಾಗಿತ್ತು. ಗ್ರಾಹಕರ ಮನತಣಿಸದ ಯೋಜನೆಗಳು ನೀರಸ ಆಗಿದ್ದವು.
ನಾಲ್ಕು ವರ್ಷಗಳ ಹಿಂದೆ, ರಿಲಯನ್ಸ್ ಕಂಪನಿ ಜಿಯೋ ಜಾರಿಗೆ ತಂದಾಗ, ಬಿಎಸ್ಸೆನ್ನೆಲ್ ಅಕ್ಷರಶಃ ಮಕಾಡೆ ಮಲಗುವಂತಾಗಿತ್ತು. ಆವತ್ತಿನ ವರೆಗೂ ಮೊಬೈಲ್ ಡಾಟಾ ಹೆಸರಲ್ಲಿ ಗ್ರಾಹಕರನ್ನು ದೋಚುತ್ತಿದ್ದ ಎರ್ಟೆಲ್, ಐಡಿಯಾ, ಡೊಕೊಮಾಗಳಿಗೂ ಬಿಸಿ ಮುಟ್ಟಿತ್ತು. ಹತ್ತು ಜೀಬಿ ಡಾಟಾ ನೀಡಿ ತಿಂಗಳಿಗೆ 350-400 ರೂಪಾಯಿ ದೋಚುತ್ತಿದ್ದ ಕಂಪನಿಗಳ ಲೂಟಿಗೆ ಜಿಯೋ ಬ್ರೇಕ್ ಹಾಕಿತ್ತು. ಆನಂತ್ರದ ಮೂರು ವರ್ಷಗಳಲ್ಲಿ ಆಗಿರೋದು ದೇಶದ ಟೆಲಿಕಾಂ ಜಗತ್ತಿನಲ್ಲಿ ಅಚ್ಚರಿಯ ಇತಿಹಾಸವೇ ಸರಿ. ಇಷ್ಟಾದ್ರೂ ಈ ಬಿಎಸ್ಸೆನ್ನೆಲ್ ಎಚ್ಚತ್ತುಕೊಳ್ಳಲೇ ಇಲ್ಲ.
2015-16ರಲ್ಲಿ 4859 ಕೋಟಿ ನಷ್ಟದಲ್ಲಿದ್ದ ಬಿಎಸ್ಸೆನ್ನೆಲ್, 16-17ರಲ್ಲಿ 4793 ಕೋಟಿ, 17-18ರಲ್ಲಿ 7,993 ಕೋಟಿ ರೂಪಾಯಿ ನಷ್ಟ ದಾಖಲಿಸಿತ್ತು. ಕಳೆದ ವಾರ, ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್, 2018-19ರ ಸಾಲಿನ ಕಂಪನಿಯ ನಷ್ಟ 14,202 ಕೋಟಿ ಎಂದು ಅಧಿಕೃತವಾಗಿ ಸದನದಲ್ಲಿ ಮಾಹಿತಿ ನೀಡಿದ್ದಾರೆ. ಕಂಪನಿಯ ಆದಾಯ ನೋಡಿದರೆ, 2018- 19ರಲ್ಲಿ 19,308 ಕೋಟಿ ರೂಪಾಯಿಗಳಾದರೆ, 17-18ರಲ್ಲಿ ಆದಾಯ 25,071 ಕೋಟಿ ಇತ್ತು. 2016-17ರಲ್ಲಿ 31,533 ಕೋಟಿ ಆದಾಯ ಗಳಿಸಿತ್ತು ಅನ್ನೋದನ್ನು ಅಂಕಿ ಅಂಶಗಳು ಹೇಳುತ್ತವೆ.
ಈಗ ಬರುತ್ತಿರೋ ಕಂಪನಿಯ ಗಳಿಕೆ, ಅಲ್ಲಿನ ನೌಕರರಿಗೆ ಸಂಬಳ ನೀಡುವುದಕ್ಕೇ ಸಾಲುತ್ತಿಲ್ಲ. ಒಟ್ಟು ಆದಾಯದ 75 ಶೇಕಡಾ ಸಂಬಳ ನೀಡಲು ಬೇಕಾಗುತ್ತಂತೆ. ಈ ಬಾರಿ, 19 ಸಾವಿರ ಕೋಟಿ ರೂಪಾಯಿ ಆದಾಯದಲ್ಲಿ 14.5 ಸಾವಿರ ಕೋಟಿ ಸಂಬಳ ನೀಡುವುದಕ್ಕೇ ವ್ಯಯವಾದರೆ, ಉಳಿದ ಖರ್ಚನ್ನು ಭರಿಸುವುದೇ ಕಂಪನಿಗೆ ಸವಾಲಾಗಿದೆ.
ಇದೇ ಕಾರಣಕ್ಕೆ ಕಳೆದ ಆರು ತಿಂಗಳಿಂದ ಬಿಎಸ್ಸೆನ್ನೆಲ್ ತನ್ನ ನೌಕರರಿಗೆ ಸಂಬಳ ನೀಡುವುದನ್ನು ವಿಳಂಬಿಸುತ್ತಾ ಬಂದಿದೆ. ಜುಲೈ ತಿಂಗಳ ಸಂಬಳವನ್ನು ಆಗಸ್ಟ್ ವೇಳೆಗೆ ನೀಡಿದ್ದಾಗಿ ಬಿಎಸ್ಸೆನ್ನೆಲ್ ಮ್ಯಾನೇಜ್ಮೆಂಟ್ ಈಗ ಹೇಳಿಕೊಳ್ತಿದೆ. ಇದೇ ವೇಳೆ, ಗುತ್ತಿಗೆ ಕಾರ್ಮಿಕರು ಸಂಬಳ ಪಾವತಿಯಾಗದೆ ಆರು ತಿಂಗಳಿಂದ ದಿಕ್ಕೆಟ್ಟು ನಿಂತಿದ್ದಾರೆ.
ಇದೇ ವೇಳೆ, ಸಾರ್ವಜನಿಕ ರಂಗದ ಬಿಎಸ್ಸೆನ್ನೆಲ್ ಕಂಪನಿ ಉಳಿಸಿಕೊಳ್ಳಬೇಕೆಂದು ಅಭಿಯಾನ ಆರಂಭಗೊಂಡಿದೆ. ಪ್ರಧಾನಿ ಮೋದಿ ಮಧ್ಯಪ್ರವೇಶಿಸಿ, ಪ್ಯಾಕೇಜ್ ಘೋಷಣೆ ಮಾಡಬೇಕು. ಕಂಪನಿಯನ್ನು ಮುಚ್ಚುವ ಬದಲು ನಷ್ಟ ಭರಿಸಬೇಕೆಂದು ಬಿಎಸ್ಸೆನ್ನೆಲ್ ನೌಕರರ ಸಂಘ ಕೇಂದ್ರಕ್ಕೆ ಮನವಿ ಮಾಡಿದೆ. ಆದರೆ, ಟೆಲಿಕಾಂ ಸಚಿವಾಲಯ ಎಲ್ಲ ಆಯಾಮಗಳನ್ನೂ ಪರಿಶೀಲಿಸುತ್ತಿದೆ. ಮುಂದಿನ ವರ್ಷಕ್ಕೆ ರೆವಿನ್ಯೂಗಿಂತಲೂ ನಷ್ಟವೇ ಹೆಚ್ಚಾಗುವ ಸಾಧ್ಯತೆ ಇರುವ ಕಾರಣ, ಕಂಪನಿ ಮುಚ್ಚುವುದೇ ಲೇಸು ಎಂಬ ಮಾತು ಕೇಳಿಬರುತ್ತಿದೆ.
ವಯಸ್ಸು ಮೀರಿದ ದೊಡ್ಡ ಸಂಖ್ಯೆಯ ನೌಕರರು, ಇನ್ನೂ 4ಜಿ ಸ್ಪೀಡ್ ಗೆ ಹೊಂದಿಕೊಳ್ಳದ ಕಂಪನಿಯ ಆಡಳಿತ ಆರ್ಥಿಕ ನಷ್ಟಕ್ಕೆ ಕಾರಣ ಅನ್ನುವುದನ್ನು ಟೆಲಿಕಾಂ ಸಚಿವರು ಹೇಳುತ್ತಿದ್ದಾರೆ. ಇನ್ನೊಂದೆಡೆ, ವಿಆರ್ ಎಸ್ ಪಡೆದು ಕಂಪನಿಗೆ ಹೊರೆಯಾಗಿರುವ ನೌಕರರ ಸಂಖ್ಯೆಯನ್ನು ಕಡಿತಗೊಳಿಸುವ ಪ್ಲಾನ್ ಕೂಡ ಇದೆ. ಇದೇನೇ ಇದ್ದರೂ, ಸರಕಾರದ ಸಂಬಳ ಬರುತ್ತೆ ಎಂದು ಬ್ರಾಡ್ ಬ್ಯಾಂಡ್ ಸರ್ವಿಸ್ ಕೇಳಿದರೂ, ಸಕಾಲಕ್ಕೆ ಆಗಮಿಸದೆ ಸತಾಯಿಸುವ ನೌಕರರಿಂದಾಗಿಯೇ ಸಾರ್ವಜನಿಕ ರಂಗದ ಕಂಪನಿಯೊಂದು ಸೊರಗುತ್ತಿದೆ ಅನ್ನುವುದಂತೂ ಸತ್ಯ.
ಈಗ ಹೇಳಿ, ಜಿಯೋ ಬಂತೆಂದು ಬಿಎಸ್ಸೆನ್ನೆಲ್ ನಷ್ಟದ ಹಾದಿ ಹಿಡಿದಿದ್ದೇ ಅಥವಾ ಖಾಸಗಿ ಕಂಪನಿಯವರು ನೀಡೋ ಎಂಜಲು ಕಾಸು ಪಡೆದು ಕಂಪನಿಯನ್ನು ಮುಳುಗಿಸಿದ್ದೋ… ಈಗಲೂ ಕಾಲ ಮಿಂಚಿಲ್ಲ. ದೇಶಾದ್ಯಂತ ಹಳ್ಳಿ ಹಳ್ಳಿಗಳಲ್ಲೂ ಮೊಬೈಲ್ ಟವರ್ ಗಳನ್ನು ಹೊಂದಿರುವ ಬಿಎಸ್ಸೆನ್ನೆಲ್ ಬಳಿ ಇರುವಷ್ಟು ಆಸ್ತಿ , ಪ್ರಭಾವ, ನೆಟ್ವರ್ಕ್ ಇನ್ಯಾವ ಖಾಸಗಿ ಕಂಪನಿಯ ಬಳಿಯೂ ಇಲ್ಲ. ಸಡ್ಡು ಹೊಡೆದು ನಿಂತರೆ, 5ಜಿ ಸ್ಪೀಡಲ್ಲಿ ಡಾಟಾ ನೀಡಲು ಯಾವ ಸರಕಾರದ ದೊಣ್ಣೆ ನಾಯಕನೂ ಬರುವುದೂ ಬೇಕಿಲ್ಲ. ಮ್ಯಾನೇಜ್ಮೆಂಟ್ ಬಳಿ ಗಟ್ಟಿ ಮನಸ್ಸು ಬೇಕಷ್ಟೇ…. ಕೋಟ್ಯಂತರ ಭಾರತೀಯರು ಇನ್ನೂ ಬಿಎಸ್ಸೆನ್ನೆಲ್ ನಂಬರನ್ನು ತಮ್ಮಲ್ಲಿ ಉಳಿಸಿಕೊಂಡಿದ್ದಾರೆ, ದೇಶದ ಮೇಲಿನ ಪ್ರೀತಿಯಿಂದ ಅಷ್ಟೇ..