BELTHANGADI
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶ**ವ ಹೂತಿಟ್ಟ ಪ್ರಕರಣ ಮೊದಲ ದಿನ 13 ಕಡೆ ಸ್ಥಳ ಮಹಜರು!

ಬೆಳ್ತಂಗಡಿ ಜುಲೈ 28: ಧರ್ಮಸ್ಥಳ ಗ್ರಾಮದಲ್ಲಿ ಅನೇಕ ಮೃತದೇಹ ಹೂತು ಹಾಕಿರುವೆ ಎಂದು ಹೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಅಧಿಕಾರಿಗಳ ಮುಂದೆ ಹಾಜರಾಗಿರುವ ಸಾಕ್ಷಿ ದೂರುದಾರ ವ್ಯಕ್ತಿ ಜತೆಗೆ ಎಸ್ ಐ ಟಿ ಅಧಿಕಾರಿಗಳು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯ ಪ್ರದೇಶದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಮೊದಲ ದಿನವೇ ಅನಾಮಧೇಯ ವ್ಯಕ್ತಿ 13 ಸ್ಥಳಗಳನ್ನು ಗುರುತು ಮಾಡಿದ್ದಾನೆ.
ಮಧ್ಯಾಹ್ನ 1 ಗಂಟೆಯಿಂದ ಆರಂಭಗೊಂಡ ಸ್ಥಳ ಮಹಜರು ಪ್ರಕ್ರಿಯೆ ಸಂಜೆ 6 ಗಂಟೆ ವರೆಗೆ ನಡೆದಿದ್ದು, ಈ ವೇಳೆಯಲ್ಲಿ ನೇತ್ರಾವತಿ ಸ್ನಾನಘಟ್ಟಕ್ಕೆ ಸಮೀಪದ ಅರಣ್ಯ ಪ್ರದೇಶದಲ್ಲಿ ಒಟ್ಟು 13 ಕಡೆ ಸ್ಥಳ ಗುರುತು ಮಾಡಲಾಗಿದೆ. ಮಧ್ಯಾಹ್ನ ಬಳಿಕ ಗುರುತಿಸಿದ ಮೂರು ಸ್ಥಳಗಳು ನೇತ್ರಾವತಿ ಸೇತುವೆಯಿಂದ ಸ್ನಾನಘಟ್ಟ ಸಾಗುವ ಮುಖ್ಯ ರಸ್ತೆಯ ಬದಿಯಲ್ಲೇ ಇರುವುದು ಅಚ್ಚರಿಗೆ ಕಾರಣವಾಗಿದೆ.
ಸಾಕ್ಷಿ ದೂರುದಾರನನ್ನು ಮಂಗಳೂರಿನ ಮಲ್ಲಿಕಟ್ಟೆಯ ಪ್ರವಾಸಿ ಬಂಗಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಶನಿವಾರ ಮತ್ತ ಭಾನುವಾರ ವಿಚಾರಣೆಗೆ ಒಳಪಡಿಸಿದ್ದರು. ಸೋಮವಾರ ಎಸ್‌ಐಟಿ ಎದುರು ಹಾಜರಾದ ಆತನನ್ನು ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಕರೆದೊಯ್ದರು. ಬಳಿಕ ಅಲ್ಲಿಂದ ನೇತ್ರಾವತಿ ಸ್ನಾನಘಟ್ಟಕ್ಕೆ ಬಿಗು ಭದ್ರತೆಯೊಂದಿಗೆ ಕರೆದೊಯ್ದರು. ನೇತ್ರಾವತಿ ನದಿ ಪಕ್ಕದಲ್ಲೇ ಇರುವ ಕಾಡಿನೊಳಗೆ ಎಸ್‌ಐಟಿ ಅಧಿಕಾರಿಗಳನ್ನು ಸಾಕ್ಷಿ ದೂರುದಾರ ಕರೆದೊಯ್ದು. ಆತನ ಜೊತೆಗೆ ಮೂವರು ವಕೀಲರೂ ಸ್ಥಳಕ್ಕೆ ತೆರಳಿದರು. ಎಸ್‌ಐಟಿಯ ಅಧಿಕಾರಿಗಳಾದ ಎಂ.ಎನ್.ಅನುಚೇತ್, ಜಿತೇಂದ್ರ ಕುಮಾರ್ ದಯಾಮ, ಸಿ.ಎ.ಸೈಮನ್ ಮೊದಲಾದ ಅಧಿಕಾರಿಗಳು ಇದರು.

ಧರ್ಮಸ್ಥಳದ ನೇತ್ರಾವತಿ ನದಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಈಗಾಗಲೇ ತಾನು ತಲೆಬುರುಡೆಯನ್ನು ತಂದ ಸ್ಥಳ ಮತ್ತು ಶವ ಹೂಳಲಾಗಿದ್ದ ಸ್ಥಳದಲ್ಲಿ ಇನ್ನಷ್ಟು ಮೂಳೆಗಳು ಇವೆ ಎಂಬುದನ್ನು ಕೂಡ ಎಸ್‌ಐಟಿ ತಂಡಕ್ಕೆ ತೋರಿಸಿದ್ದಾನೆ. ಈ ವೇಳೆ ಕೇವಲ ಶವ ಹೂತಿದ್ದ ಜಾಗವಷ್ಟೇ ಅಲ್ಲ, ಅಲ್ಲಿನ ಸಮಾಧಿಯ ರೂಪದಲ್ಲಿದ್ದ ಕೆಲವು ಸ್ಥಳಗಳನ್ನೂ ನಿರ್ದಿಷ್ಟವಾಗಿ ಗುರುತಿಸಿದ್ದಾನೆ. ಇನ್ನು ಅನಾಮಿಕ ವ್ಯಕ್ತಿ ಸ್ಥಳ ತೋರಿಸಿದ ಆಧಾರದ ಮೇಲೆ ಅರಣ್ಯದ ಒಳಭಾಗದಲ್ಲಿ ಸಮಾಧಿಗಳ ಮೇಲೆ ಮಾರ್ಕಿಂಗ್ ಪ್ರಕ್ರಿಯೆ ಮಾಡಲಾಗಿದೆ. ದೂರುದಾರನ ಮಾಹಿತಿ ಆಧಾರದಲ್ಲಿ ಸ್ಥಳ ಗುರುತಿಸುವ ಆರಂಭಿಕ ಪ್ರಕ್ರಿಯೆಯನ್ನು ಇಂದು ಮಾಡಲಾಗಿದೆ.
ನೇತ್ರಾವತಿ ಯ ನದಿ ತಟದ ಕಾಡಿನಲ್ಲಿ ಸ್ಥಳ ಪರಿಶೀಲನೆ ನಡೆಸಿ, ನೇತ್ರಾವತಿಯ ಸ್ನಾನ ಘಟ್ಟದ ಸಮೀಪದ ಅಜಿಕುರಿ ರಸ್ತೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ.
ಸಂಜೆ 5- 40 ರ ಸುಮಾರಿಗೆ ಕನ್ಯಾಡಿಯ ಖಾಸಗಿ ಜಾಗವೊಂದಕ್ಕೂ ಅನಾಮಧೇಯ ವ್ಯಕ್ತಿಯ ಕರೆದುಕೊಂಡು ಹೋಗಲಾಗಿದ್ದು ಅಲ್ಲಿಯೂ ನೇತ್ರಾವತಿ ಕಿನಾರೆಯಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ಬಳಿಕ ಬೆಳ್ತಂಗಡಿಯ ಎಸ್.ಐ.ಟಿ. ಕಚೇರಿಗೆ ಅನಾಮಧೇಯ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ತನಿಖೆ ನಡೆಸಲಾಗಿದೆ. ಈ ಎಲ್ಲ ಪ್ರಕ್ರಿಯೆಗಳ ನಡುವೆ ವಿಶಾಲ ಜಾಗವನ್ನು ಗುರುತಿಸುವ ನಿಟ್ಟಿನಲ್ಲಿ ನೇತ್ರಾವತಿ ಕಿಂಡಿ ಅಣೆಕಟ್ಟು ಸಮೀಪದ ತಡೆಗೋಡೆ ಅಂಚಿನಲ್ಲಿ ಡೋನ್ ಸಹಾಯದಿಂದಲೂ ಸ್ಥಳದ ದೃಶ್ಯವನ್ನು ಸೆರೆಹಿಡಿಯುವ ಮೂಲಕ ಸ್ಥಳ ಮಹಜರು ನಡೆಸಲಾಗಿದೆ.
ಸದ್ಯ ಮೊದಲ ದಿನವೇ ಶವ ಹೂತು ಹಾಕಿರುವ 13 ಸ್ಥಳಗಳನ್ನು ದೂರುದಾರ ಗುರುತಿಸಿದ್ದಾನೆ. ಇದರೊಂದಿಗೆ ಈ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಘಟಕ್ಕೆ ಸಾಗುತ್ತಿದೆ.