KARNATAKA
ಕೆಜಿಎಫ್ – 2 ಬಿಡುಗಡೆಗೆ ತಡೆ ಕೋರಿ ಕೋರ್ಟ್‌ನಲ್ಲಿ ದಾವೆ ಸಲ್ಲಿಸಿದ ಕಲ್ಯಾಣ ಕರ್ನಾಟಕ ವೇದಿಕೆ
ಬೆಂಗಳೂರು, ಏಪ್ರಿಲ್ 12: ದೇಶಾದ್ಯಂತ ಕನ್ನಡದ ಸಿನಿಮಾದ ಟ್ರೆಂಡ್ ಶುರುವಾಗಿದೆ. ಕೆಜಿಎಫ್ ಚಾಫ್ಟರ್ – 2 ಸಿನಿಮಾ ಜ್ವರ ಎಲ್ಲೆಡೆ ಹಬ್ಬಿದೆ. ಏಪ್ರಿಲ್ 14 ರಂದು ಕರ್ನಾಟಕ ಸೇರಿ ನಾನಾ ಭಾಷೆಗಳಲ್ಲಿ ಕೆಜಿಎಫ್ -2 ಸಿನಿಮಾ ಬರೋಬ್ಬರಿ 7500 ಥೀಯೇಟರ್‌ಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ.
ಇಂತಹ ಸಂಭ್ರಮದ ಕಾಲದಲ್ಲೇ ಬಿಡುಗಡೆಗೆ ಕಂಟಕ ಎದುರಾಗಿದೆ. ಕೆಜಿಎಫ್ – 2 ಸಿನಿಮಾ ಬಿಡುಗಡೆಗೆ ತಡೆ ಕೋರಿ ಕಲ್ಯಾಣ ಕರ್ನಾಟಕ ವೇದಿಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಕಲ್ಯಾಣ ಕರ್ನಾಟಕ ವೇದಿಕೆ ಸಂಸ್ಥಾಪಕ ಅಶೋಕ್ ಕುಮಾರ್ ಅಲಿಯಾಸ್ ದುಮ್ಮೇನಹಳ್ಳಿ ಅಶೋಕ್ ಕುಮಾರ್, ಅಖಂಡ ಕರ್ನಾಟಕ ಜನಜಾಗೃತಿ ವೇದಿಕೆ, ಸುರೇಶ್, ರೈತ ಮಾತ್ತು ಕಾರ್ಮಿಕರ ರಕ್ಷಣಾ ವೇದಿಕೆ ವತಿಯಿಂದ ಸಿನಿಮಾ ತಡೆ ಕೋರಿ ಸಿಟಿ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಕೆಜಿಎಫ್ ಸಿನಿಮಾಗೆ ಸಾಮಾಜಿಕ ಬದ್ಧತೆ ಇಲ್ಲ. ಕೇವಲ ಚಾಕು- ಚೂರಿ ಸಂಸ್ಕೃತಿ ತೋರಿಸಿದ್ದಾರೆ. ಕ್ರೌರ್ಯವನ್ನು ಮೆರೆಸಿದ್ದಾರೆ. ಇಂತಹ ಸಿನಿಮಾಗಳ ಬಿಡುಗಡೆಯಿಂದ ಸಾಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಚಿತ್ರದಲ್ಲಿರುವ ಕ್ರೌರ್ಯ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೆನ್ಸಾರ್ ಬೋರ್ಡ್‌ಗೆ ದೂರು ಸಲ್ಲಿಸಿದ್ದೆವು. ನಮ್ಮ ಮನವಿ ಅಂಗೀಕರಿಸಿಲ್ಲ. ಬದಲಿಗೆ ಕ್ರೌರ್ಯ ಇರುವ ಸಿನಿಮಾಗೆ ಯುಎ ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಅನುಮತಿ ನೀಡಿದೆ.
ಚಲನ ಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟರೂ ಪ್ರಯೋಜನ ಆಗಿಲ್ಲ. ಹೀಗಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ನಾಳೆ ನಮ್ಮ ಅರ್ಜಿಯ ವಿಚಾರಣೆ ಇದೆ ಎಂದು ಅರ್ಜಿದಾರ ಅಶೋಕ್ ಕುಮಾರ್ ತಿಳಿಸಿದ್ದಾರೆ.