KARNATAKA
ಜಮಖಂಡಿ – ತಾಳಿಕಟ್ಟಿದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ವರ ಸಾವು

ಬಾಗಲಕೋಟೆ ಮೇ 17: ಮದುವೆ ಸಂಭ್ರಮದಲ್ಲಿದ್ದ ಮನೆ ಕೆಲವೇ ಕ್ಷಣಗಳಲ್ಲಿ ಸೂತಕದ ಮನೆಯಾದ ಘಟನೆ ಜಮಖಂಡಿ ಪಟ್ಟಣದಲ್ಲಿ ಶನಿವಾರ ನಡೆದಿದೆ. ತಾಳಿ ಕಟ್ಟಿ ಮದುವೆಯ ಸಂಭ್ರಮದಲ್ಲಿದ್ದ ವರ ಮದುವೆ ಮನೆಯಲ್ಲಿಯೇ ಹೃದಯಾಘಾತದಿಂದ ಸಾವನಪ್ಪಿದ್ದಾನೆ.
ಮೃತರನ್ನು ಪ್ರವೀಣ ಕುರಣಿ ಎಂದು ಗುರುತಿಸಲಾಗಿದೆ. ಯುವಕ ಕಳೆದ ರಾತ್ರಿ ಮದುವೆಯ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ್ದಾನೆ. ಬೆಳಗ್ಗೆ 10 ಗಂಟೆಗೆ ದೇವರ ಪೂಜೆ ನಂತರ ವಧುವಿಗೆ ತಾಳಿ ಕಟ್ಟಿದ್ದಾರೆ. ನಂತರ ಅಕ್ಷತಾ ಕಾರ್ಯಕ್ರಮ ಮುಗಿಸಿ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಮಧ್ಯಾಹ್ನದ ಸಮಯದಲ್ಲಿ ವಧು – ವರ ವೇದಿಕೆ ಮೇಲೆ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದಾರೆ.
ಇನ್ನೇನು ಬಂಧು-ಬಳಗದವರು ಆಗಮಿಸಿ, ಶುಭ ಹಾರೈಸುವುದು ಪ್ರಾರಂಭವಾಗುತ್ತಿದ್ದಂತೆ ಪ್ರವೀಣ್ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕಿಲ್ಲ. ಇಂತಹ ಹೃದಯ ವಿದ್ರಾವಕ ಘಟನೆಯಿಂದಾಗಿ ಅವರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಮದುವೆ ಸಂಭ್ರಮದಲ್ಲಿದ್ದ ವರನ ಮನೆಯಲ್ಲಿ ಸ್ಮಶಾನ ಮೌನ ಆವರಿಸಿತ್ತು.
