BELTHANGADI
ಡಾ. ಡಿ ವಿರೇಂದ್ರ ಹೆಗ್ಗಡೆಯವರ ಮೇಣದ ಪ್ರತಿಮೆ – ತದ್ರೂಪ ಕಂಡು ಶಾಕ್ ಆದ ವೀರೇಂದ್ರ ಹೆಗ್ಗಡೆ ದಂಪತಿ
ಮಂಗಳೂರು ಸೆಪ್ಟೆಂಬರ್ 09: ಬೆಂಗಳೂರಿನ ಕಲಾವಿದರೊಬ್ಬರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರ ಮೇಣದ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದು,ತಮ್ಮ ತದ್ರೂಪ ಕಂಡು ಖುದ್ದು ವೀರೇಂದ್ರ ಹೆಗ್ಗಡೆ ದಂಪತಿಯೇ ಮೂಕವಿಸ್ಮಿತರಾಗಿದ್ದಾರೆ. ಆ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಮೇಣದ ಪ್ರತಿಮೆಯನ್ನು ಪುಟ್ಟಪರ್ತಿಯ ಹೆಗ್ಗಡೆಯವರ ನಿವಾಸದಲ್ಲಿ ಇರಿಸಲಾಗಿದೆ.
ವೀರೇಂದ್ರ ಹೆಗ್ಗಡೆಯವರ ಕುಟುಂಬ ಅಲ್ಲಿಗೆ ಹೋಗಿದ್ದ ವೇಳೆ ಸುಳಿವೇ ಇಲ್ಲದಂತೆ ಆಶ್ಚರ್ಯಕರವಾಗಿ ಅವರ ಮುಂದೆ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಪ್ರತಿಮೆಗೆ ಮೊದಲಿಗೆ ಬಟ್ಟೆಯೊಂದನ್ನು ಅಡ್ಡಲಾಗಿ ಇರಿಸಲಾಗಿತ್ತು. ಒಂದೊಂದೇ ಲೈಟ್‌ಗಳನ್ನು ಹಾಕಿ ಮೇಣದ ಪ್ರತಿಮೆಯನ್ನು ಹೆಗ್ಗಡೆಯವರಿಗೆ ತೋರಿಸಲಾಗಿದೆ. ತಮ್ಮದೇ ತದ್ರೂಪು ಕಂಡು ಹೆಗ್ಗಡೆಯವರು ಒಮ್ಮೆ ಅವಕ್ಕಾಗಿದ್ದಾರೆ. ಯಥಾವತ್ತಾಗಿ ಹೆಗ್ಗಡೆಯವರನ್ನೇ ಹೋಲುತ್ತಿದ್ದರಿಂದ ಪ್ರತಿಮೆಯ ಕೈ ಗಳನ್ನು ಮುಟ್ಟಿ ಹೇಮಾವತಿ ಹೆಗ್ಗಡೆಯವರೂ ಸಂತಸ ಪಟ್ಟಿದ್ದಾರೆ.
ಕೈಗಳು, ದೇಹದ ಆಕಾರ, ಮುಖ, ಕಣ್ಣು, ಕಿವಿ, ಕೂದಲು ಸೇರಿದಂತೆ ಸರ್ವಾಂಗ, ನಿಲ್ಲುವ ಭಂಗಿಯನ್ನು ಸೂಕ್ಷ್ಮವಾಗಿ ಗ್ರಹಿಸಿ ಮೇಣದ ಪ್ರತಿಮೆಯನ್ನು ತಯಾರಿಸಲಾಗಿದೆ. ಕೊನೆಗೆ ಶ್ವೇತವಸ್ತ್ರಧಾರಿಯಾಗಿ ನಿಂತಿರುವ ಹೆಗ್ಗಡೆಯವರ ಮೇಣದ ಪ್ರತಿಮೆ ಸಿದ್ಧಗೊಂಡಿದೆ.
ಅಕ್ಟೋಬರ್ ತಿಂಗಳಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧ್ಯುಂತ್ಸವ ನಡೆಯಲಿದೆ. ಈ ವೇಳೆ ಧರ್ಮಸ್ಥಳಕ್ಕೆ ಈ ಪ್ರತಿಮೆಯನ್ನು ತರಲಾಗುತ್ತದೆ. ಬಳಿಕ ಸಾರ್ವಜನಿಕ ವೀಕ್ಷಣೆಗೆ ಇಡಲಾಗುತ್ತದೆ ಎಂದು ಹೇಳಲಾಗಿದೆ.