LATEST NEWS
ನೀರಿನಿಂದ ಮೇಲೆಳುತ್ತಿರುವ ಲಂಗರು ಹಾಕಿದ ಮೀನುಗಾರಿಕಾ ಬೋಟ್ ಗಳು ಆತಂಕದಲ್ಲಿ ಮೀನುಗಾರರು

ನೀರಿನಿಂದ ಮೇಲೆಳುತ್ತಿರುವ ಲಂಗರು ಹಾಕಿದ ಮೀನುಗಾರಿಕಾ ಬೋಟ್ ಗಳು ಆತಂಕದಲ್ಲಿ ಮೀನುಗಾರರು
ಮಂಗಳೂರು ಅಗಸ್ಟ್ 10: ದಕ್ಷಿಣಕನ್ನಡ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಇಂದು ಕೂಡಾ ಭಾರೀ ಮಳೆಯಾಗಿದೆ. ಕಳೆದ 5 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಇಂದು ಕೂಡ ಮುಂದುವರೆದಿದೆ. ಮಳೆಯ ಪ್ರಮಾಣ ಅಧಿಕವಾಗಿರುವ ಹಿನ್ನಲೆಯಲ್ಲಿ ಇನ್ನೊಂದೆಡೆ ಸಮುದ್ರದ ಅಬ್ಬರ ಕೂಡ ಹೆಚ್ಚಾಗಿದೆ. ನದಿ ನೀರು ಸಮುದ್ರಕ್ಕೆ ನುಗ್ಗುತ್ತಿರುವ ಹಿನ್ನಲೆ ಕಡಲ ನೀರಿನ ಬಣ್ಣವೇ ಬದಲಾಗಿದೆ.
ಎರಡು ತಿಂಗಳ ರಜೆ ನಂತರ ಮೀನುಗಾರಿಕೆಗೆ ತೆರಳಬೇಕಾಗಿದ್ದ ಆಳ ಸಮುದ್ರ ಬೋಟುಗಳು ನೀರಿಗಿಳಿಯದೆ ಬಂದರಿನಲ್ಲೇ ಲಂಗರು ಹಾಕಿವೆ. ಭಾರಿ ಉತ್ಸಾಹದಿಂದ ಮೀನುಗಾರಿಕಾ ಋತು ಪ್ರಾರಂಭಕ್ಕೆ ಹೊರಟಿದ್ದ ಮೀನುಗಾರರ ಆಸೆಗೆ ಮಳೆ ತಣ್ಣೀರೆರೆಚಿದೆ.
ಈ ನಡುವೆ ಮೀನುಗಾರರಿಗೆ ಮತ್ತೊಂದು ಸಮಸ್ಯೆ ಎದುರಾಗಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಲಂಗರು ಹಾಕಿದ ನೂರಾರು ಬೋಟ್ ಗಳಿಗೂ ತೊಂದರೆಯಾಗಿದೆ.

ಬಂದರು ಪ್ರದೇಶದ ಹಿನ್ನೀರಿನಲ್ಲಿ ಬೋಟ್ ಗಳನ್ನು ಲಂಗರು ಹಾಕಿರುವ ಪ್ರದೇಶದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಬೋಟ್ ಗಳು ನೀರಿನಿಂದ ಮೇಲೇಳುತ್ತಿದೆ. ಇದರಿಂದಾಗಿ ಬೋಟ್ ಗಳಿಗೆ ತೊಂದರೆಯಾಗುವ ಆತಂಕದಲ್ಲೂ ಮೀನುಗಾರರಿದ್ದಾರೆ.
ಕ್ಷಣಕ್ಷಣಕ್ಕೂ ಸಮುದ್ರದ ಮಟ್ಟ ಮೇಲೆರುತ್ತಾ ಇದೆ. ಇತ್ತ ಸಮುದ್ರದ ಅಲೆಗಳ ಆರ್ಭಟವೂ ಜೋರಾಗಿದೆ, ಅಳಿವೆ ಬಾಗಿಲಿನಲ್ಲಿ ನೀರಿನ ಮಟ್ಟ 20 ಮೀಟರ್ ನಷ್ಟು ಏರಿದೆ. ಈ ನಡುವೆ ಮಳೆ ಕೂಡ ನಿಲ್ಲದೆ ಇರುವುದರಿಂದ ಮೀನುಗಾರರಿಗೆ ಹೆದರಿಕೆಯಲ್ಲೇ ದಿನಕಳೆಯುವಂತಾಗಿದೆ.
ಬಂದರಿನಲ್ಲಿ ನೀರಿನಮಟ್ಟ ಇನ್ನು ಹೆಚ್ಚಾದರೆ ಲಂಗರು ಹಾಕಿದ ಬೋಟ್ ಗಳಿಗೆ ಭಾರಿ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.