ಮಾಸ್ಕೋ ಮೇ 10: “ಯುದ್ಧಕ್ಕಿಂತ ಶಾಂತಿಯೇ ಮುಖ್ಯ. ಉಕ್ರೇನ್ ಸಂಘರ್ಷವು ಈಗ ಅಂತ್ಯದ ಹಂತಕ್ಕೆ (Winding down) ತಲುಪುತ್ತಿದೆ” ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಹತ್ವದ ಹೇಳಿಕೆ ನೀಡಿದ್ದಾರೆ. ಮಾಸ್ಕೋದಲ್ಲಿ ನಡೆದ ವಿಜಯೋತ್ಸವದ ಪರೇಡ್ ಬಳಿಕ ಮಾತನಾಡಿದ ಅವರು, ಸುದೀರ್ಘ ಕಾಲದ ಯುದ್ಧ ಕೊನೆಗೊಳ್ಳುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ.

ಪಶ್ಚಿಮದ ದೇಶಗಳು ಉಕ್ರೇನ್ಗೆ ನೀಡುತ್ತಿರುವ ಮಿಲಿಟರಿ ನೆರವು ರಷ್ಯಾವನ್ನು ಸೋಲಿಸುವಲ್ಲಿ ವಿಫಲವಾಗಿದೆ ಎಂದು ಪುಟಿನ್ ಟೀಕಿಸಿದ್ದಾರೆ. “ರಷ್ಯಾವನ್ನು ಯುದ್ಧಭೂಮಿಯಲ್ಲಿ ಸೋಲಿಸಬಹುದು ಎಂದು ಅವರು ಭಾವಿಸಿದ್ದರು. ಆದರೆ ಈಗ ಅವರ ಯೋಜನೆಗಳು ಉಲ್ಟಾ ಹೊಡೆದಿವೆ. ನ್ಯಾಟೋ (NATO) ಒಕ್ಕೂಟವೇ ರಷ್ಯಾದ ವಿರುದ್ಧ ನಿಂತಿದ್ದರೂ ನಮ್ಮ ಸೈನಿಕರ ಧೈರ್ಯದ ಮುಂದೆ ಅವರೆಲ್ಲರೂ ಸೋತಿದ್ದಾರೆ. ಈಗ ಅವರು ಗೌರವಯುತವಾಗಿ ಯುದ್ಧದಿಂದ ಹೊರಬರಲಾರದ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ” ಎಂದು ಅವರು ಲೇವಡಿ ಮಾಡಿದ್ದಾರೆ.
ನಾವು ಮಾತುಕತೆಗೆ ಸಿದ್ಧರಿದ್ದೇವೆ ಆದರೆ ಅದು ನಮ್ಮ ಹಿತಾಸಕ್ತಿ ಮತ್ತು ಸುರಕ್ಷತೆಯ ಖಾತರಿಯನ್ನು ಹೊಂದಿರಬೇಕು ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ. ವಿಶೇಷವಾಗಿ ಅಮೆರಿಕದ ಡೊನಾಲ್ಡ್ ಟ್ರಂಪ್ ಅವರ ಶಾಂತಿ ಪ್ರಸ್ತಾಪವನ್ನು ಗಮನಿಸುತ್ತಿರುವುದಾಗಿ ಹೇಳಿರುವುದು ಗಮನಾರ್ಹ. ಪ್ರಸ್ತುತ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಮೂರು ದಿನಗಳ ತಾತ್ಕಾಲಿಕ ಕದನ ವಿರಾಮ ಜಾರಿಯಲ್ಲಿದ್ದು, ಕೈದಿಗಳ ವಿನಿಮಯ ಪ್ರಕ್ರಿಯೆಯೂ ಆರಂಭವಾಗಿದೆ.
2022ರಲ್ಲಿ ಆರಂಭವಾದ ಈ ಯುದ್ಧದಿಂದ ಲಕ್ಷಾಂತರ ಜನರ ಪ್ರಾಣಹಾನಿಯಾಗಿದೆ. ಸದ್ಯ ಉಕ್ರೇನ್ನ ಸುಮಾರು ಐದನೇ ಒಂದು ಭಾಗದಷ್ಟು ಪ್ರದೇಶ ರಷ್ಯಾದ ನಿಯಂತ್ರಣದಲ್ಲಿದೆ. ಉಕ್ರೇನ್ ಸರ್ಕಾರವು ತನ್ನ ಭೌಗೋಳಿಕ ಸಮಗ್ರತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿರುವುದರಿಂದ, ಶಾಂತಿ ಮಾತುಕತೆ ಅಂದುಕೊಂಡಷ್ಟು ಸುಲಭವಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.