DAKSHINA KANNADA
ವಕ್ಫ್ ಆಸ್ತಿ : ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಯವರನ್ನು ಭೇಟಿಯಾದ SDPI ನಿಯೋಗ
ಮಂಗಳೂರು : ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷರಾದ ಅನ್ವರ್ ಮಾಣಿಪ್ಪಾಡಿಯವರನ್ನು SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಯವರ ನೇತೃತ್ವದ ನಿಯೋಗವು ಮಂಗಳೂರಿನ ಅವರ ಸ್ವಗೃಹದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿತು.
ಅನ್ವರ್ ಮಾಣಿಪ್ಪಾಡಿ ಯವರು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಿದ್ಧ ಪಡಿಸಿದ ವಕ್ಫ್ ಆಸ್ತಿಗಳ ವಿವರ ಮತ್ತು ವಕ್ಫ್ ಆಸ್ತಿಯನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡ ಬಗ್ಗೆ ತನ್ನ ವರದಿಯಲ್ಲಿ ಬೆಳಕು ಚೆಲ್ಲಿರುವ ಬಗ್ಗೆ ಸ್ಪಷ್ಟವಾಗಿ ವಿವರಿಸಿದರು. “ಅನ್ವರ್ ಮಾಣಿಪ್ಪಾಡಿ ವರದಿ” ಎಂದೇ ಹೆಸರು ಪಡೆದ ಈ ವರದಿಯನ್ನು ಸರಕಾರ ಕಳೆದ ಹತ್ತು ವರ್ಷಗಳಿಂದ ಅನುಷ್ಠಾನಕ್ಕೆ ತರದೆ ಇರುವ ಬಗ್ಗೆ ಮಾಣಿಪ್ಪಾಡಿಯವರು ಬೇಸರ ವ್ಯಕ್ತಪಡಿಸುತ್ತಾ, ಈ ವರೆಗಿನ ಸರಕಾರಗಳು ವಕ್ಫ್ ಹಗರಣಗಳ ಬಗ್ಗೆ ಸೂಕ್ತ ತನಿಖೆಯಾಗಲಿ, ಕಾನೂನು ಕ್ರಮಗಳಾಗಲಿ ಕೈಗೊಂಡಿಲ್ಲ. ಇದು ಘೋರ ಅನ್ಯಾಯ ಎಂದರು.
ಮುಸ್ಲಿಮ್ ದಾನಿಗಳು ಮಸೀದಿ, ಮದ್ರಸಾ, ಈದ್ಗಾ, ಖಬರ್ ಸ್ಥಾನ ಇತ್ಯಾದಿ ಗಳಿಗಾಗಿ ದಾನ ಮಾಡಿದ ಸೊತ್ತುಗಳೇ ವಕ್ಫ್. ಕರ್ನಾಟಕ ರಾಜ್ಯದಲ್ಲಿ ಸಾವಿರಾರು ಎಕ್ರೆ ವಕ್ಫ್ ಭೂಮಿ ಕಬಳಿಸಿದವರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕ್ಯಾಬಿನೆಟ್ ಮಂತ್ರಿಗಳು, ಶಾಸಕರುಗಳು,ಸೇರಿದಂತೆ ಪ್ರಭಾವಿಗಳು ಒಳಗೊಂಡಿದ್ದಾರೆ. ಪ್ರಸಕ್ತ ಶಾಸಕ ಸಂಸದರಾಗಿರುವವರು ವಕ್ಫ್ ಭೂಮಿಯನ್ನು ಕೊಳ್ಳೆ ಹೊಡೆದವರಿದ್ದಾರೆ ಎಂದು ತನ್ನ ವರದಿಯಲ್ಲಿ ದಾಖಲೆಗಳ ಸಮೇತ ತೋರಿಸಿದ್ದಾರೆ.
ಮುಸ್ಲಿಮರ ಹೆಸರಲ್ಲಿ ಮುಸ್ಲಿಮರ ಮತಗಳನ್ನು ಗಿಟ್ಟಿಸಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ ವಕ್ಫ್ ಭೂಮಿಯನ್ನು ನುಂಗಿದ ಇಂತಹ ಭ್ರಷ್ಟಾತಿಭ್ರಷ್ಟಾ ಪುಡಾರಿಗಳು ರಾಜಾರೋಷವಾಗಿ ಮೆರೆಯುತ್ತಿದ್ದಾರೆ ಎಂದು ಬೊಟ್ಟು ಮಾಡಿ ವಿವರಿಸಿದರು. ಇಂತಹಾ ದರೋಡೆಕೋರರನ್ನು ಜೈಲಿಗೆ ತಳ್ಳುವ ಬದಲು ಸಮುದಾಯದ ಹೆಸರಲ್ಲಿ ಆರಿಸಿ ಕಳುಹಿಸಿತ್ತಿರುವುದು ಅತ್ಯಂತ ದುರಾದೃಷ್ಟಕರ ಎಂದರು. ಇನ್ನೂ ಕಾಲ ಮಿಂಚಿಲ್ಲ. ನೈಜ ಇಚ್ಚಾಶಕ್ತಿಯೊಂದಿಗೆ ಹೋರಾಟ ನಡೆಸಿದರೆ ಕೊಳ್ಳೆ ಹೊಡೆಯಲ್ಪಟ್ಟ ವಕ್ಫ್ ಭೂಮಿಯನ್ನು ವಶಪಡಿಸಿಕೊಳ್ಳುವುದು ಹಾಗೂ ಕಳ್ಳ ಪುಡಾರಿಗಳು ಜೈಲು ಪಾಲಾಗುವುದು ಸಾಧ್ಯ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನಡೆದಿರುವ ವಕ್ಫ್ ಹಗರಣಗಳ ವಿವರಗಳನ್ನು ನೀಡುತ್ತಾ ನಮ್ಮ ಸಮುದಾಯದ ಆಸ್ತಿಗಳು ಹೇಗೆ ಭ್ರಷ್ಟರ ಪಾಲಾಗುತ್ತಿದೆ ಎನ್ನುವುದನ್ನು ಸಾಕ್ಷ್ಯ ಸಮೇತ ವಿವರಿಸಿದರು.
ಈ ಸಂದರ್ಭದಲ್ಲಿ ‘ವಕ್ಫ್ ತಿದ್ದುಪಡಿ 2024’ ಮಸೂದೆಯ ವಿರುದ್ಧ SDPI ಪಕ್ಷವು ದೇಶದಾದ್ಯಂತ ನಡೆಸುತ್ತಿರುವ ಪ್ರತಿಭಟನೆಗಳು, ಜನಜಾಗ್ರತಿಗಳ ಬಗ್ಗೆ ಅನ್ವರ್ ಮಾಣಿಪ್ಪಾಡಿ ಮೆಚ್ಚುಗೆ ವ್ಯಕ್ತಪಡದಿಸಿದರು. ಕರ್ನಾಟಕ ರಾಜ್ಯದ ಎಲ್ಲ ವಕ್ಫ್ ಹಗರಣಗಳನ್ನು ಬಯಲು ಮಾಡುವುದರೊಂದಿಗೆ, ದೃಢ ನಿಶ್ಚಯದ ಕಾನೂನು ಹೋರಾಟ ನಡೆಸುವ ಬಗ್ಗೆ SDPI ಶೀಘ್ರದಲ್ಲೇ ತೊಡಗಿಕೊಳ್ಳುವುದು ಎಂಬ ವಿಚಾರವನ್ನು ಮಣಿಪ್ಪಡಿ ಯವರಿಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ SDPI ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಕಾರ್ಯದರ್ಶಿ ಅಕ್ಬರ್ ರಾಝ ಉಪಸ್ಥಿತರಿದ್ದರು