LATEST NEWS
ಮಂಗಳಾ ಕ್ರೀಡಾಂಗಣ ವಾಕಿಂಗ್ ಟ್ರ್ಯಾಕ್ ಸಾರ್ವಜನಿಕರ ಬಳಕೆಗೆ ಶೀಘ್ರ ಲಭ್ಯ- ಶಾಸಕ ಕಾಮತ್
ಮಂಗಳೂರು ಸೆಪ್ಟೆಂಬರ್ 10 : ನಗರದ ಮಂಗಳಾ ಕ್ರೀಡಾಂಗಣ ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೆತ್ತಿಕೊಂಡ ಸಂದರ್ಭ ಕ್ರೀಡಾಂಗಣದ ಸುತ್ತಲೂ ಸಾರ್ವಜನಿಕರಿಗೆ ವಾಕಿಂಗ್ ಟ್ರ್ಯಾಕ್ ಮಾಡಿಸಿಕೊಡಬೇಕು ಎಂಬ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ವಾಕಿಂಗ್ ಟ್ರ್ಯಾಕ್ ಕಾಮಗಾರಿಯನ್ನು ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗಿತ್ತು. ಇದೀಗ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ವಾಕಿಂಗ್ ಟ್ರ್ಯಾಕ್‍ಗೆ ಸರಕಾರದಿಂದ ಒಂದೂವರೆ ಕೋಟಿ ರೂ. ಬಿಡುಗಡೆ ಆಗಿ ಕಾಮಗಾರಿ ಆರಂಭವಾಗಿತ್ತು. ಆದರೆ ಈಗ ಕಾಮಗಾರಿ ಸ್ಥಳದಲ್ಲಿ ಮಣ್ಣಿನ ರಾಶಿಗಳು ಬಿದ್ದಿದ್ದು, ವಾಕಿಂಗ್ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅಥ್ಲೆಟಿಕ್ ಅಸೋಸಿಯೇಶನ್ ಪ್ರಮುಖರು ಕೂಡಾ ಗಮನಕ್ಕೆ ತಂದಿದ್ದರು. ಮುಂದಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ, ಕಾರ್ಪೊರೇಶನ್ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.
ಸ್ಥಳೀಯ ಪಾಲಿಕೆ ಸದಸ್ಯೆ ಸಂಧ್ಯಾ ಮೋಹನ್, ಸಾರ್ವಜನಿಕರ ಪರವಾಗಿ ಪುರುಷೋತ್ತಮ ಪೂಜಾರಿ ದಕ್ಷಿಣ ಕನ್ನಡ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷರು, ದೇವಿದಯಾಳ್ ಕನ್‍ಸ್ಟ್ರಕ್ಷನ್ ಮಾಲೀಕ ಜಗದೀಶ್ ಶೆಟ್ಟಿ ಸೇರಿದಂತೆ ಅನೇಕ ಸಾರ್ವಜನಿಕರು ಈ ಕಾಮಗಾರಿ ಪೂರ್ಣಗೊಳಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಅವರೆಲ್ಲರ ಮನವಿ ಪ್ರಕಾರ ಅತೀ ಶೀಘ್ರದಲ್ಲಿ ಉಳಿಕೆ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಮುಂದುವರಿಸಲು ಚಿಂತನೆ ನಡೆಸಲಾಗಿದೆ. ಈ ಕಾಮಗಾರಿಗಳು ಪೂರ್ಣಗೊಂಡಲ್ಲಿ ಸಾರ್ವಜನಿಕರಿಗೆ ವಾಕಿಂಗ್ ಟ್ರ್ಯಾಕ್ ಬಳಕೆಗೆ ಲಭ್ಯವಾಗಲಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಭರವಸೆ ನೀಡಿದ್ದಾರೆ.