DAKSHINA KANNADA
ವಿಟ್ಲ- 30 ಲಕ್ಷ ದರೋಡೆ ಪ್ರಕರಣ ತನಿಖೆಗೆ 4 ತಂಡ ರಚನೆ – ಅಷ್ಟು ದೊಡ್ಡ ಮನೆಯಲ್ಲಿ ಒಂದೂ ಸಿಸಿಟಿವಿ ಇಲ್ಲ
ವಿಟ್ಲ ಜನವರಿ 06: ಇಡಿ ಅಧಿಕಾರಿಗಳಂತೆ ವರ್ತಿಸಿ ವಿಟ್ಲ ಬೋಳಂತೂರಿನ ನಾರ್ಶದಲ್ಲಿ ಉದ್ಯಮಿಯೊಬ್ಬರ ಮನೆಯಿಂದ 30 ಲಕ್ಷ ಹಣ ದರೋಡೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್.ತಿಳಿಸಿದ್ದಾರೆ .
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 4 ತಂಡಗಳು ವಿವಿಧ ಆಯಾಮದಲ್ಲಿ ತನಿಖೆ ಆರಂಭಿಸಿವೆ. ಕೃತ್ಯದಲ್ಲಿ ಹೊರ ಜಿಲ್ಲೆಯವರು ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದ್ದು ಆ ನಿಟ್ಟಿನಲ್ಲೂ ತನಿಖೆ ಮುಂದುವರಿದಿದೆ. ಇನ್ನುಳಿದಂತೆ ತಾಂತ್ರಿಕ ತಂಡ, ಜಿಲ್ಲೆಯ ನಾನಾ ಕಡೆ ನಡೆದ ದರೋಡೆ ಪ್ರಕರಣಗಳ ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿದೆ.
ವಿಟ್ಲ ಬೋಳಂತೂರಿನ ನಾರ್ಶದಲ್ಲಿ ಶುಕ್ರವಾರ ರಾತ್ರಿ ನಡೆದ ದರೋಡೆ ಪ್ರಕರಣದಲ್ಲೂ 6 ಮಂದಿಯ ತಂಡ ಭಾಗಿಯಾಗಿದ್ದು, ಒಬ್ಬ ಕನ್ನಡ ಮಾತನಾಡುತ್ತಿದ್ದರೆ, ಉಳಿದವರು ಇಂಗ್ಲಿಷ್- ಹಿಂದಿಯಲ್ಲಿ ಮಾತನಾಡುತ್ತಿದ್ದರು. ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಎಂದು ಹೇಳಿಕೊಂಡ ದರೋಡೆಕೋರರು ಬೋಳಂತೂರು ಬೀಡಿ ಉದ್ಯಮಿ ಸುಲೈಮಾನ್ ಅವರ ಮನೆಗೆ ನುಗ್ಗಿ 30 ಲಕ್ಷ ರೂ. ದೋಚಿ ಪರಾರಿಯಾಗಿದ್ದರು. ಇದರಿಂದ ಹೊರರಾಜ್ಯದವರು ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನ ದಟ್ಟವಾಗಿದೆ.
ಉದ್ಯಮಿಯ ಮನೆ ವಿಶಾಲವಾಗಿದ್ದರೂ ಒಂದೇ ಒಂದು ಸಿಸಿ ಕ್ಯಾಮೆರಾ ಮನೆಯಲ್ಲಾಗಲೀ, ಮನೆಗೆ ಹೋಗುವ ದಾರಿಯಲ್ಲಾಗಲಿ ಇಲ್ಲ. ಒಂದು ರೀತಿ ಒಂಟಿ ಮನೆಯಾದ ಕಾರಣ ಪೊಲೀಸರಿಗೆ ಯಾವುದೇ ಕ್ಲೂ ಸಿಕ್ಕಿಲ್ಲ. ದರೋಡೆಕೋರರು ಕೃತ್ಯದ ಬಳಿಕ ಕೇರಳದ ಕಡೆಗೆ ಹೋಗಿರುವ ಅನುಮಾನವಿದ್ದು, ಕುಡ್ತಮುಗೇರು, ಕೋಡಪದವು, ಬೋಳಂತೂರು, ಸುರಿಬೈಲು ಆಸುಪಾಸಿನಲ್ಲಿ ಸುತ್ತಾಡಿಕೊಂಡಿರುವುದು ಬಹಿರಂಗಗೊಂಡಿದೆ. ನಾರ್ಶದಿಂದ ಕಲ್ಲಡ್ಕ ಮೂಲಕ ಮಂಗಳೂರಿಗೆ ಕಾರು ಸಾಗಿದೆ ಎಂದು ಹೇಳಲಾಗುತ್ತಿದ್ದು, ಟೋಲ್ ಗೇಟ್‌ನಲ್ಲಿ ಏನಾದರೂ ಮಾಹಿತಿ ಲಭಿಸಿರಬಹುದೇ ಎಂದು ಹುಡುಕಾಟ ನಡೆಯುತ್ತಿದೆ.