DAKSHINA KANNADA
ವೋಕಲ್ ಫಾರ್ ಲೋಕಲ್ – ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಲ್ಲಿ ಸಾಫ್ಟ್‌ವೇರ್ ದಂಪತಿಗಳ ಸ್ವದೇಶಿ ಚಾಕಲೇಟ್
ಪುತ್ತೂರು : ಕೋವಿಡ್ 19 ಮಹಾಮಾರಿಯ ದಾಳಿಯ ಬಳಿಕ ಜನರ ಜೀವನ ನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಬದುಕಿಗಾಗಿ ಇತರರನ್ನು ಅವಲಂಭಿಸುವ ಬದಲು ತಮ್ಮಲ್ಲಿದ್ದ ವಸ್ತುಗಳಿಂದಲೇ ತಮಗೆ ಬೇಕಾದವುಗಳನ್ನು ತಯಾರಿಸುವ ಹಂತಕ್ಕೆ ಜನ ಸಿದ್ಧರಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಸ್ವತಹ ದೇಶದ ಪ್ರಧಾನಿಯೇ ವೋಕಲ್ ಫಾರ್ ಲೋಕಲ್, ಆತ್ಮನಿರ್ಭರ್ ಭಾರತ್ ಎನ್ನುವ ಹೊಸ ಸಂದೇಶವನ್ನು ನೀಡುವ ಮೂಲಕ ಇಂಥಹ ಚಟುವಟಿಕೆಗಳು ಹೆಚ್ಚು ಹೆಚ್ಚು ನಡೆಸುವಂತೆ ಪ್ರೋತ್ಸಾಹಿಸಿದ್ದಾರೆ.
ಇದೇ ಪ್ರೋತ್ಸಾಹದ ಕರೆಗೆ ಓಗೊಟ್ಟು ಸಾಫ್ಟವೇರ್ ಇಂಜಿನಿಯರ್ ದಂಪತಿಗಳು ಕೊಕ್ಕೋದಿಂದ ಸ್ವದೇಶಿ ಚಾಕಲೇಟ್ ಆವಿಷ್ಕರಿಸುವ ಮೂಲಕ ಪ್ರಚಾರದಲ್ಲಿದ್ದಾರೆ. ತಾವು ತಯಾರಿಸಿದ ಚಾಕಲೇಟುಗಳನ್ನು ದೇಶದ ಮೂಲೆ ಮೂಲೆಗಲ್ಲದೆ, ವಿದೇಶಕ್ಕೂ ಪರಿಚಯಿಸುವ ಮೂಲಕ ವಿಶೇಷ ಸಾಧನೆಯನ್ನೂ ಮಾಡಿ ತೋರಿಸಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಚ್ಚಿಮಲೆ ನಿವಾಸಿಗಳಾದ ಕೇಶವಮೂರ್ತಿ-ಪೂರ್ಣಶ್ರೀ ದಂಪತಿಗಳ ಚಾಕಲೇಟ್ ಯಶೋಗಾಥೆ. ಬೆಂಗಳೂರಿನಲ್ಲಿ ಸಾಫ್ಟ್ ವೆರ್ ಉದ್ಯೋಗದಲ್ಲಿದ್ದ ಈ ಯುವ ದಂಪತಿ ಕೋವಿಡ್ 19 ಜಾಗತಿಕವಾಗಿ ಹಬ್ಬಿದ ಸಮಯದಲ್ಲಿ ಲಾಕ್ ಡೌನ್ ನಿಂದ ಬೆಂಗಳೂರಿನಿಂದ ಊರಿಗೆ ಬಂದಿದ್ದರು. ಮನೆಯಿಂದಲೇ ವರ್ಕ್ ಪ್ರಂ ಹೋಮ್ ರೀತಿ ದುಡಿಯುತ್ತಿದ್ದ ಈ ದಂಪತಿಗಳು ತಮ್ಮ ಬಿಡುವಿನಲ್ಲಿ ತೋರಿಸಿದ ಜಾಣ್ಮೆ ಇದೀಗ ಈ ದಂಪತಿಗಳನ್ನು ಸ್ವದೇಶೀ ಚಾಕಲೇಟ್ ದಂಪತಿಗಳು ಎನ್ನುವಷ್ಟರ ಮಟ್ಟಿಗೆ ಬೆಳೆಸಿದೆ. ಮನೆಯ ತೋಟದಲ್ಲಿ ಸುಮಾರು ಹದಿನೆಂಟು ಎಕರೆ ಕೃಷಿ ಭೂಮಿಯಲ್ಲಿ ಸುಮಾರು ಐನೂರರಷ್ಟು ಕೊಕ್ಕೋ ಬೆಳೆ ಇದ್ದು .ಬಹಳಷ್ಟು ಬೀಜಗಳು ನಿರುಪಯುಕ್ತವಾಗುತ್ತಿರುವುದನ್ನು ಮನಗಂಡು ಕೊಕ್ಕೋ ಹಣ್ಣಿನ ಬೀಜಗಳಿಂದ ಚಾಕಲೇಟ್ ತಯಾರಿಸುವ ಹೊಸ ಯೋಚನೆಯೊಂದು ಹೊಳೆದಿತ್ತು.
ಇದೇ ಸಂದರ್ಭದಲ್ಲಿ ದೇಶದ ಪ್ರಧಾನಿಗಳ ಸ್ವಾವಲಂಬಿ ಬದುಕಿನ ಪರಿಕಲ್ಪನೆಯ ವೋಕಲ್ ಫಾರ್ ಲೋಕಲ್, ಆತ್ಮನಿರ್ಭರ್ ಎನ್ನುವ ಕರೆಯನ್ನೂ ನೀಡಿದ್ದು, ದಂಪತಿಗಳ ಯೋಚನೆ ಕಾರ್ಯರೂಪಕ್ಕೆ ಬರಲೂ ಉತ್ತೇಜನವೂ ನೀಡಿತ್ತು.
ಕಳೆದ ಎಂಟು ವರುಷದಿಂದ ಬೆಂಗಳೂರಿನಲ್ಲಿ ಸಾಪ್ಟ್ ವೆರ್ ಉದ್ಯೋಗಿಯಾಗಿರುವ ಪೂರ್ಣಾಶ್ರೀ ಮತ್ತು ಹದಿನೈದು ವರುಷದಿಂದ ಸಾಪ್ಟ್ ವೆರ್ ಉದ್ಯೋಗಿಯಾಗಿರುವ ಕೇಶವಮೂರ್ತಿ ಅವರು ಕೊಕ್ಕೋದಿಂದ ಚಾಕಲೇಟ್ ತಯಾರಿಕೆಯ ಆವಿಷ್ಕಾರ ಮಾಡಿ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ.
ಯಾವುದೇ ರಾಸಾಯನಿಕ ಕಲಬೆರಕೆ ಮಾಡದೆ ಸಾವಯವ ಮಾದರಿಯಲ್ಲೇ ತಯಾರಿಸಿದ ಚಾಕಲೇಟನ್ನು ಇದೀಗ ಆನ್ ಲೈನ್ ಮೂಲಕ ಮಾರಾಟವನ್ನೂ ನಡೆಸುತ್ತಿದ್ದಾರೆ. ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ವಿದೇಶಗಳಿಂದಲೂ ಇದೀಗ ಈ ಚಾಕಲೇಟ್ ಗೆ ಬೇಡಿಕೆ ಬರುತ್ತಿದೆ. ಈ ದಂಪತಿಗಳು ತಯಾರಿಸುವ ಚಾಕಲೇಟ್ ಡಾರ್ಕ್ ಮಾದರಿಯ ಚಾಕಲೇಟ್ ಆಗಿದ್ದು, ಇದರಲ್ಲಿ ಸಕ್ಕರೆ ಅಂಶ ಕಡಿಮೆಯಿದ್ದು, ಕೊಕ್ಕೋ ಅಂಶವೇ ಹೆಚ್ಚಾಗಿದೆ. ಇದರಿಂದಾಗಿ ಈ ಚಾಕಲೇಟ್ ಗಳು ಇತರ ಕಂಪನಿಗಳು ತಯಾರಿಸುವ ಚಾಕಲೇಟ್ ಗಳನ್ನು ಸಿಹಿಯಾಗಿಲ್ಲ. ರುಚಿಗೆ ತಕ್ಕಷ್ಟು ಮಾತ್ರ ಸಕ್ಕರೆ ಬಳಕೆ ಮಾಡಿ ಕೊಕ್ಕೋದ ನೈಸರ್ಗಿಕ ರುಚಿಯಾದ ಕಹಿಯನ್ನೇ ಈ ಚಾಕಲೇಟು ಹೊಂದಿದೆ. ಸಕ್ಕರೆ ಹಾಗೂ ಬೆಲ್ಲವನ್ನು ಹೀಗೆ ಎರಡು ಮಾದರಿಯ ಚಾಕಲೇಟನ್ನು ತಯಾರಿಸಲಾಗುತ್ತಿದ್ದು, ಬೆಲ್ಲದಿಂದ ತಯಾರಿಸಿದ ಚಾಕಲೇಟನ್ನು ಮಧುಮೇಹಿಗಳೂ ತಿನ್ನಬಹುದಾಗಿದೆ.
ಪ್ರಧಾನಿಗಳು ದೇಶದ ಸಂಪನ್ಮೂಲಗಳನ್ನೇ ಬಳಸಿಕೊಂಡು ಯುವ ಜನತೆ ಸ್ವ ಉದ್ಯೋಗದ ಮೂಲಕ ಸ್ವಾವಲಂಭಿಯಾಗಬೇಕೆಂದು ನೀಡಿದ ಕರೆಗೆ ಪುತ್ತೂರಿನ ಈ ಸಾಫ್ಟವೇರ್ ದಂಪತಿಗಳು ಸ್ಪಂದಿಸಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ತಯಾರಾದ ಚಾಕಲೇಟ್ ಮೂಲಕ ದೇಶ-ವಿದೇಶಗಳಿಗೂ ಮುಟ್ಟುವಂತೆ ಮಾಡಿದ ಈ ದಂಪತಿಗಳ ಸಾಧನೆಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು..