ವಿಟ್ಲ,ಮಾರ್ಚ್ 25:: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ವಿಟ್ಲ ಪೊಲೀಸರು ಕೇರಳದ ಮಂಜೇಶ್ವರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಜೇಶ್ವರ ನಿವಾಸಿ ಮೊಹಮ್ಮದ್ ಫಯಾಜ್ (33) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. 2019ರಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಫಯಾಜ್ ವಿರುದ್ಧ ಐಪಿಸಿ ಕಲಂ 323, 507, 353 ಹಾಗೂ 504 ರಡಿ (ಅ.ಕ್ರ ನಂ: 181/2019) ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದರೂ, ಆರೋಪಿಯು ಸುದೀರ್ಘ ಕಾಲದಿಂದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿಯ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು.
ಆರೋಪಿಯು ಕೇರಳ ರಾಜ್ಯದ ಮಂಜೇಶ್ವರದ ಬಾಯಾರು ಪದವು ಎಂಬಲ್ಲಿ ಅಡಗಿರುವ ಬಗ್ಗೆ ವಿಟ್ಲ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ವಿಟ್ಲ ಠಾಣೆಯ ಪೊಲೀಸರ ತಂಡವು ಮಂಜೇಶ್ವರಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದಿದೆ. ಈ ಕಾರ್ಯಾಚರಣೆಯಲ್ಲಿ ಎಎಸ್ಐ ಜಯರಾಮ ಅವರಿಗೆ ಠಾಣಾ ಸಿಬ್ಬಂದಿಗಳಾದ ಶ್ರೀಕುಮಾರ್, ಗೋಪಾಲಕೃಷ್ಣ, ಮಾಯಪ್ಪ ಮತ್ತು ವೆಂಕಪ್ಪ ಅವರು ಸಾಥ್ ನೀಡಿದ್ದಾರೆ. ಬಂಧಿತ ಆರೋಪಿಯನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.