DAKSHINA KANNADA
ಭಾರೀ ಮಳೆಗೆ ವಿಟ್ಲ-ಕೊಲ್ಯ ಸಂಪರ್ಕ ರಸ್ತೆಯಲ್ಲಿ ಬಿರುಕು
ವಿಟ್ಲ ಅಗಸ್ಟ್ 27: ವಿಟ್ಲದಲ್ಲಿ ಸುರಿದ ಬಾರೀ ಮಳೆಗೆ ವಿಟ್ಲ-ಕೊಲ್ಯ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇನ್ನೊಂದು ಘಟನೆಯಲ್ಲಿ ಭಾರೀ ಪ್ರಮಾಣದ ಗುಡ್ಡವೊಂದು ಮನೆ ಮೇಲೆ ಕುಸಿದು ಬಿದ್ದಿದ್ದು, ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಟ್ಲದಿಂದ ಕೊಲ್ಯ ಭಾಗಕ್ಕೆ ಸಂಪರ್ಕಿಸುವ ರಸ್ತೆಯ ಕಲ್ಲಕಟ್ಟ ಹೊಳೆಗೆ ಕಟ್ಟಲಾದ ತಡೆಗೋಡೆ ಬಿರುಕು ಬಿಟ್ಟಿದೆ. ಇದರಿಂದ ಕಲ್ಲಕಟ್ಟ-ಕೊಲ್ಯ ರಸ್ತೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ. ಈ ರಸ್ತೆಯನ್ನು ಸುಮಾರು 16 ಮನೆಯವರು ಪ್ರಯೋಜನ ಪಡೆಯುತ್ತಿದ್ದು, ರಸ್ತೆ ಕುಸಿದರೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.
ಇನ್ನೊಂದು ಘಟನೆಯಲ್ಲಿ ವಿಟ್ಲ ಕಸಬಾ ಗ್ರಾಮದ ಕುರುಂಬಳ ಎಂಬಲ್ಲಿ ಮನೆ ಮೇಲೆ ಭಾರೀ ಪ್ರಮಾಣದ ಗುಡ್ಡ ಕುಸಿದು ಬಿದ್ದಿದೆ. ಕುರುಂಬಳ ನಿವಾಸಿ ಕಲಂದರ್ ಅಲಿ ಎಂಬವರ ಮನೆ ಮೇಲೆ ಭಾರೀ ಪ್ರಮಾಣದ ಗುಡ್ಡ ಕುಸಿದು ಬಿದ್ದಿದೆ. ಮನೆಯಲ್ಲಿ ಮಕ್ಕಳು ಸಹಿತ ಏಳು ಮಂದಿ ಇದ್ದು, ಅವರು ಮನೆಯೊಳಗಡೆ ಇದ್ದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮತ್ತಷ್ಟು ಗುಡ್ಡ ಕುಸಿಯುವ ಭೀತಿಯಿದ್ದು, ಮನೆಮಂದಿಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ.