LATEST NEWS
ರೈಲ್ವೆ ಹಳಿಯ ಕಬ್ಬಿಣ ಕದ್ದ ಆರೋಪ ಶಾಲಾ ಮಕ್ಕಳ ಮೇಲೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ – ಮೂರು ಕೇಸ್ ದಾಖಲಿಸಿದ ಪಡುಬಿದ್ರಿ ಪೊಲೀಸರು

ಪಡುಬಿದ್ರಿ ಫೆಬ್ರವರಿ 17: ರೈಲ್ವೆ ಹಳಿಯ ಲಿಂಕಿಂಗ್ ಕಬ್ಬಿಣವನ್ನು ಕದ್ದಿ ಆರೋಪದ ಮೇಲೆ ಅಪ್ರಾಪ್ತ ಶಾಲಾ ಮಕ್ಕಳಿಬ್ಬರ ಮೇಲೆ ನಡೆಸಿ ಅದರ ವಿಡಿಯೋ ವೈರಲ್ ಮಾಡಿದ ಆರೋಪದ ಮೇಲೆ ರೈಲ್ವೆ ಗ್ಯಾಂಗ್ ಮನ್ ಮೇಲೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಡುವೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಎರಡು ಪ್ರಕರಣಗಳನ್ನು ಪಡುಬಿದ್ರಿ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಪಲಿಮಾರು ಗ್ರಾಮದ ಅವರಾಲು ಮಟ್ಟು ರೈಲು ಹಳಿಯ ಸಮೀಪವಿದ್ದ ಕಬ್ಬಿಣದ ತುಂಡನ್ನು ಹೆಕ್ಕಿದರೆಂಬ ಕಾರಣಕ್ಕೆ ಅಪ್ರಾಪ್ತ ವಯಸ್ಸಿನ ಬಾಲಕರಿಬ್ಬರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಅದರ ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಆರೋಪದಲ್ಲಿ ಕೊಂಕಣ ರೈಲ್ವೇಯ ಗ್ಯಾಂಗ್‌ಮನ್ ಒಬ್ಬರ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ರವಿವಾರ ಪ್ರಕರಣ ದಾಖಲಾಗಿದೆ. ಶನಿವಾರ ಘಟನೆ ನಡೆದಿದ್ದು, ಬಾಲಕನೊಬ್ಬನ ತಂದೆ ಹೆಜಮಾಡಿಯ ಅಬ್ದುಲ್ ಖಾದರ್ ಪೊಲೀಸರಿಗೆ ರವಿವಾರ ದೂರು ನೀಡಿದ್ದಾರೆ.

ಅವರಾಲು ಮಟ್ಟುವಿನಲ್ಲಿ ಬಾಲಕನ ಅಜ್ಜನ ಮನೆಯಿದ್ದು ಫೆ. 15ರಂದು ಮಧ್ಯಾಹ್ನದ ವೇಳೆಗೆ ಗೆಳೆಯನೊಂದಿಗೆ ಅಲ್ಲಿಗೆ ಹೋಗಿದ್ದ. ರೈಲು ಹಳಿಯ ಬಳಿ ಆಟವಾಡುತ್ತಿದ್ದಾಗ ಕಾಣಿಸಿದ ಕಬ್ಬಿಣದ ತುಂಡೊಂದನ್ನು ಆತ ಹೆಕ್ಕಿದ್ದನು. ಅದನ್ನು ಗಮನಿಸಿದ ರೈಲ್ವೇ ಗ್ಯಾಂಗ್‌ಮನ್ ಕೋಲಿನಿಂದ ಬಾಲಕನೊಬ್ಬನ ತಲೆಗೆ ಹಾಗೂ ಇನ್ನೋರ್ವನ ಎಡಗಾಲಿಗೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ.
ರೈಲ್ವೆ ಆವರಣವು ರೈಲ್ವೆ ಇಲಾಖೆಯ ವ್ಯಾಪ್ತಿಗೆ ಒಳಪಡುವುದರಿಂದ, ಕೊಂಕಣ ರೈಲ್ವೆಯ ಕಾನೂನು ವಿಭಾಗವು ಸಲ್ಲಿಸುವ ವರದಿಯನ್ನು ಆಧರಿಸಿ ಅಪ್ರಾಪ್ತ ವಯಸ್ಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಅಲ್ಲದೆ ಅಪ್ರಾಪ್ತ ವಯಸ್ಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ಅನುಮತಿ ನೀಡಿದ ತಂದೆಯ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಪೊಲೀಸ್ ಇಲಾಖೆ ತಿಳಿಸಿದೆ.