DAKSHINA KANNADA
ಸುಳ್ಯ – ಕಾರಿನಲ್ಲಿ ಹುಚ್ಚಾಟ ಮೆರೆದಿದ್ದ ಯುವಕರನ್ನು ಪತ್ತೆ ಹಚ್ಚಿದ ಪೊಲೀಸರು

ಸುಳ್ಯ ಎಪ್ರಿಲ್ 12: ಚಲಿಸುತ್ತಿರುವ ಕಾರಿನಿಂದ ಹೊರಗೆ ಇಣುಕಿ ಹುಚ್ಚಾಟ ಮೆರೆದಿದ್ದ ಆರು ಮಂದಿ ಯುವಕರನ್ನು ಸುಳ್ಯ ಪೊಲೀಸರು ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ.
ಕೆಲ ದಿನಗಳ ಹಿಂದೆ ಸಂಪಾಜೆ ಭಾಗದಿಂದ ಸುಳ್ಯದತ್ತ ವೇಗವಾಗಿ ಚಲಿಸುತ್ತಿರುವ ಕಾರಿನಲ್ಲಿದ್ದ 7 ಜನರಲ್ಲಿ 6 ಮಂದಿ ಹುಚ್ಚಾಟ ಮೆರೆದಿದ್ದರು. ಕಾರಿನಿಂದ ಹೊರಗೆ ಬಂದ ಕೆಲ ಯುವಕರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಸುಳ್ಳ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ಯುವಕರಿಗಾಗಿ ಪತ್ತೆ ಕಾರ್ಯ ಆರಂಭಿಸಿದ್ದರು, ಆದರೆ ಯುವಕರು ಕೇಸ್ ಆಗಿದೆ ಎಂದು ತಿಳಿಯುತ್ತಲೇ ನಾಪತ್ತೆಯಾಗಿದ್ದಾರು.

ಹುಚ್ಚಾಟ ಮೆರೆದ ತಂಡ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರೆಂದು ಪತ್ತೆ ಹಚ್ಚಿದ್ದಾರೆ. ಕಾರಿನಲ್ಲಿ 7 ಮಂದಿ ಇದ್ದು ಅವರು ಮಡಿಕೇರಿಯಿಂದ ಭಟ್ಕಳಕ್ಕೆ ತೆರಳುವ ವೇಳೆ ಈ ರೀತಿ ಪುಂಡಾಟ ಮೆರೆದಿದ್ದಾರೆ. ಸಾಜೀಲ್ ಎಂಬಾತ ಕಾರನ್ನು ಚಾಲನೆ ಮಾಡುತ್ತಿದ್ದು, ಅತೀಫ್, ಸುಮನ್, ಜಯೇಶ್, ಸಾಜೀಬ್, ಸಾಹಿಬಝ್, ಹಸನ್ ಎಂಬವರು ಕಾರಿನ ಮೇಲೆ ಪುಂಡಾಟ ಮೆರೆದವರು ಎಂದು ತಿಳಿದುಬಂದಿದೆ. ಕೃತ್ಯ ಎಸಗಿದವರನ್ನು ಸುಳ್ಯ ಪೊಲೀಸರು ಪತ್ತೆ ಹಚ್ಚಿ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯಲಿದೆ.