LATEST NEWS
ವೈರಲ್ ಆದ 8ನೇ ತರಗತಿಯ ಪ್ರಶ್ನೆಪತ್ರಿಕೆಯ ಆ ಪ್ರಶ್ನೆ ಯಾವುದು ?

ವೈರಲ್ ಆದ 8ನೇ ತರಗತಿಯ ಪ್ರಶ್ನೆಪತ್ರಿಕೆಯ ಆ ಪ್ರಶ್ನೆ ಯಾವುದು ?
ಮಂಗಳೂರು ಮಾರ್ಚ್ 27: ಬೆಂಗಳೂರಿನ ಇಂಗ್ಲೀಷ್ ಹೈಸ್ಕೂಲ್ ನ ಪ್ರಶ್ನೆ ಪತ್ರಿಕೆಯೊಂದರಲ್ಲಿ ರಾಜಕೀಯ ನಾಯಕರ ಬಗ್ಗೆ ಇರುವ ಪ್ರಶ್ನೆವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ಮೌಂಟ್ ಕಾರ್ಮೆಲ್ ಇಂಗ್ಲಿಷ್ ಹೈಸ್ಕೂಲ್‌ನ 2019ನೇ ಸಾಲಿನ 8ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ತೃತೀಯ ಭಾಷೆ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಕೇಳಿರುವ ಪ್ರಶ್ನೆ ಇದಾಗಿದ್ದು, ಪ್ರಶ್ನೆಯಲ್ಲಿ ರೈತನ ಮಿತ್ರನಾರು? ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯೋ ಅಥವಾ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೋ ಅಥವಾ ಎರೆಹುಳುವೋ?. ಎಂದು ಕೇಳಲಾಗಿದೆ.

ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಈ ರೀತಿಯ ಪ್ರಶ್ನೆ ನೋಡಿ ವಿಧ್ಯಾರ್ಥಿಗಳು ಉತ್ತರಿಸಲು ತಬ್ಬಿಬ್ಬಾಗಿದ್ದರು. ಪರೀಕ್ಷೆಯಲ್ಲಿ ಇಂತಹ ಅಸಂಬದ್ಧವಾದ ಪ್ರಶ್ನೆ ಕೇಳಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ರೈತನ ಮಿತ್ರನಾಗಿ ಸಿಎಂ ಹಾಗೂ ಮಾಜಿ ಸಿಎಂ ಅವರನ್ನು ಉತ್ತರದ ಆಯ್ಕೆಗೆ ಅವಕಾಶ ಕಲ್ಪಿಸಿರುವುದು, ಪ್ರಭಾವಿಗಳ ಓಲೈಕೆಗೋ ಅಥವಾ ಮಕ್ಕಳ ಜ್ಞಾನವನ್ನು ಪರೀಕ್ಷಿಸಲೋ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಸಾರ್ವಜನಿಕ ಶಿಕ್ಷಣ ಇಲಾಖೆಯು ಆಯಾ ಶಾಲೆಗಳಲ್ಲೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲು ಅವಕಾಶ ಕಲ್ಪಿಸಿರುವುದು ಇಂತಹ ಗೊಂದಲಗಳಿಗೆ ಕಾರಣವಾಗುತ್ತಿದೆ. ಎರೆಹುಳು ರೈತನ ಮಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರು ರಾಜಕಾರಣಿಗಳಾಗಿದ್ದು, ರೈತನ ಮಿತ್ರನಿಗೆ ಹೋಲಿಸಿ ಉತ್ತರ ಬರೆಯಲು ಕೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ರೀತಿಯ ಪ್ರಶ್ನೆಗಳನ್ನು ಕೇಳುವ ಮೂಲಕ ಎಳೆಯ ವಿಧ್ಯಾರ್ಥಿಗಳ ಮನಸ್ಸಿನಲ್ಲಿ ರಾಜಕೀಯ ಬಿತ್ತುವ ಕಾರ್ಯವನ್ನು ಈ ಶಾಲೆ ಮಾಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.